ಬೆಂಗಳೂರು: ರಾಜ್ಯದ ಸರಕಾರಿ ನೌಕರರ ಸಂಬಳದಲ್ಲಿ ದಯವಿಟ್ಟು ಕಡಿತ ಮಾಡಬೇಡಿ. ನೀವೇ ಅವರನ್ನು ಕೆಲಸಕ್ಕೆ ಬರಬೇಡಿ, ರಜೆ ತೆಗೊಳ್ಲಿ ಎಂದು ಹೇಳಿ ಈಗ ಸಂಬಳದಲ್ಲಿ ಕಡಿತ ಮಾಡಿದರೆ ಹೇಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸರಕಾರಕ್ಕೆ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು ಸರಕಾರಿ ನೌಕರರಿಗೆ ಸಂಬಳ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕೆಲವು ಸರಕಾರಿ ನೌಕರರಿಗೆ ವೇತನ ಆಗಿಲ್ಲ. ಇಂತಹ ಸಮಸ್ಯೆ ಯಾವ ಸರಕಾರದಲ್ಲೂ ಆಗಿರಲಿಲ್ಲ. ಕೆಲವೊಂದು ಯೋಜನೆಗಳನ್ನು ಬೇಕಾದರೆ ನಿಲ್ಲಿಸಿ. ಆದರೆ ಯಾವ ಸಕಾರಿ ನೌಕರರ ವೇತನವನ್ನೂ ನಿಲ್ಲಿಸಬಾರದು ಎಂದು ಆಗ್ರಹಿಸಿದ್ದಾರೆ.
ಕೋವಿಡ್-19 ಲಾಕ್ ಡೌನ್ ಸರಕಾರಿ ನೌಕರರಿಗೂ ಹಿನ್ನೆಲೆ ಸಾಕಷ್ಟು ಸಮಸ್ಯೆಗಳಿವೆ. ಅವರಿಗೆ ತಮ್ಮದೇ ಆದ ಕಷ್ಟಗಳಿವೆ. ಆದ್ದರಿಂದ ಸರಕಾರ ಅವರ ವೇತನವನ್ನು ನಿಲ್ಲಿಸಬಾರದು. ಮೊದಲು ಅವರ ವೇತನ ಬಿಡುಗಡೆ ಮಾಡಬೇಕು ಎಂದು ಡಿ ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ವಿಶ್ವ ಆರೋಗ್ಯ ದಿನಾಚರಣೆಗೆ ಶುಭಕೋರಿದ ಡಿ ಕೆ ಶಿವಕುಮಾರ್, ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದೆ. ಕೆಪಿಸಿಸಿ ವತಿಯಿಂದ ವೈದ್ಯಕೀಯ ಸೆಲ್ ಪ್ರಾರಂಭಿಸಿದ್ದೇವೆ. ನೂರಕ್ಕೂ ಹೆಚ್ಚು ವೈದ್ಯರು ಸೇವೆ ನೀಡುತ್ತಾರೆ. ಜನರಿಗೆ ಅಗತ್ಯವಾದ ಟ್ರೀಟ್ ಮೆಂಟ್ ಕೊಡುತ್ತಾರೆ ಎಂದರು.
ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಉಗ್ರಪ್ಪ, ಅಜಯ್ ಸಿಂಗ್ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದರು.