ಯಾದಗಿರಿ: ” ಯಾವ ಡಿಕೆಶಿನೂ ಬೇಡ ಏನೂ ಬೇಡ ನಡಿರಿ ಆ ಕಡೆ ನಡಿರಿ.ನಾವು ಏನು ಕಾರ್ಯಕ್ರಮ ಮಾಡುತ್ತಾ ಇದೀವಿ ಎಂದು ತಿಳಿದುಕೊಳ್ಳಿ ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಕಾರ್ಯಕರ್ತರನ್ನು, ಹಾಗೂ ಅಭಿಮಾನಿಗಳನ್ನು ಗದರಿಸಿದ ಘಟನೆ ಬುಧವಾರ ನಡೆದಿದೆ.
ಇಂಪಿರಿಯಲ್ ಗಾರ್ಡನ್‌ನಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಸುತ್ತುವರೆದು ” ಡಿ.ಕೆ. ಡಿ.ಕೆ. ಡಿ.ಕೆ ” ಎಂದು ಒಮ್ಮೆಲೆ ಕೂಗತೊಡಗಿದಾಗ ಗರಂ ಆದ ಡಿ.ಕೆ. ಶಿವಕುಮಾರ್ ಕಾರ್ಯಕರ್ತರನ್ನು ಗದರಿಸಬೇಕಾಯಿತು.
ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಅಭಿಮಾನಿಗಳು ತುಂಬಾ ಉತ್ಸುಕತೆಯಿಂದ ಒಂದೇ ಸಮನೆ ಕೂಗತೊಡಗಿದರು. ಪಕ್ಷದ ಆಯೋಜಕರು ಪದೇ ಪದೇ ಮನವಿ ಮಾಡಿದರು. ಕಾರ್ಯಕರ್ತರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅನಿವಾರ್ಯವಾಗಿ ಪೊಲೀಸರನ್ನು ಕರೆಸಿದಾಗಲೂ ಪರಿಸ್ಥಿತಿ ಕನಿಷ್ಠ ಇಪ್ಪತ್ತು ನಿಮಿಷದವರಗೆ ಸುಧಾರಿಸಲೇ ಇಲ್ಲ. ನಿಗದಿತ ಸಮಯಕ್ಕಿಂದ ಒಂದುವರೆ ತಾಸು ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಆದರೂ ಕಾರ್ಯಕರ್ತರ ಅಶಿಸ್ತು ಮುಂದುವರೆದಿತ್ತು.
ಡಿಕೆಸಿ ಸಮ್ಮುಖದಲ್ಲಿ ರಾಷ್ಟ್ರಗೀತೆ ಗೆ ಅಗೌರವ
ವೇದಿಕೆಗೆ ಅತಿಥಿಗಳು ಬರುವ ಮುಂಚೇನೆ ವಂದೇ ಮಾತರಂ ಗಾಯನ ಜರುಗಿತು. ಆಯೋಜಕರು ಎದ್ದು ನಿಲ್ಲುವಂತೆ ಮನವಿ ಮಾಡಿದಾಗಲೂ ಅರ್ಧ ಜನ ಮಾತ್ರ ಎದ್ದು ನಿಂತಿದ್ದರು. ವಂದೇ ಮಾತರಂ ಗೀತೆ ಮುಗಿದ ನಂತರ ಒಮ್ಮೆಲೆ ರಾಷ್ಟ್ರಗೀತೆ ಸೌಂಡ್ ಸಿಸ್ಟಂನಲ್ಲಿ ಮೊಳಗತೊಡಗಿತು. ಮೊದಲೇ ಗೊಂದಲದ, ಗದ್ದಲದ ನಡುವೆ ಇದ್ದ ಕಾರ್ಯಕರ್ತರಿಗೆ ರಾಷ್ಟ್ರಗೀತೆ ಕೇಳಿಸದೇ ಮತ್ತಷ್ಟು ಗೊಂದಲವಾಗಿದ್ದರಿಂದ ರಾಷ್ಟ್ರಗೀತೆಯನ್ನು ತಕ್ಷಣ ಅರ್ಧದಲ್ಲೇ ನಿಲ್ಲಿಸಲಾಯಿತು..
ಅಶಿಸ್ತನ್ನು ಸಹಿಸದೆ ಕೊನೆಗೆ ವೇದಿಕೆ ಏರಿದ ಶಿವಕುಮಾರ ಅವರು, ”ಯಾರನ್ನು ಕರೆಯಲಾಗಿದೆಯೋ ಅವರು ಮಾತ್ರ ವೇದಿಕೆ ಮೇಲೆ ಬನ್ನಿ. ಎಲ್ಲಾ ಕಾರ್ಯಕರ್ತರು ಶಾಂತರಾಗುವವರೆ ವೇದಿಕೆ ಕಾರ್ಯಕ್ರಮ ನಡೆಸುವುದಿಲ್ಲ ಇಲ್ಲದಿದ್ದರೆ ಸಭೆ ಮಾಡದೇ ನಾನು ನಾನು ಹೊರಟು ಹೋಗುತ್ತೇನೆ ” ಎಂದು ಮತ್ತಷ್ಟು ಗರಂ ಆದರು.