ನವದೆಹಲಿ: ರೋಸ್ ಅವೆನ್ಯೂ ಕೋರ್ಟ್ ನಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜೀ ಸಚಿವ ಡಿ.ಕೆ. ಶಿವಕುಮಾರ್ ಅವರು ಇದೀಗ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನ್ಯಾಯಾಲಯವು ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುವುದಕ್ಕೂ ಮುನ್ನ ವೈದ್ಯಕೀಯ ತಪಾಸಣೆಗಾಗಿ ನಗರದ ಆರ್.ಎಂ.ಎಲ್. ಆಸ್ಪತ್ರೆಗೆ ಕರೆತರಲಾಯಿತು.
ಸುಮಾರು ಎರಡು ಗಂಟೆಗಳ ಸುದೀರ್ಘ ತಪಾಸಣೆಯ ನಂತರ ಶಿವಕುಮಾರ್ ಅವರನ್ನು ಇದೀಗ ಆಸ್ಪತ್ರೆಯ ಕಾರ್ಡಿಯಾಕ್ ಕೇರ್ ಯುನಿಟ್ ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ ರಾತ್ರಿಯನ್ನು ಶಿವಕುಮಾರ್ ಅವರು ತಿಹಾರ್ ಜೈಲಿನ ಬದಲು ಆಸ್ಪತ್ರೆಯ ಬೆಡ್ ಮೇಲೆ ಕಳೆಯುವಂತಾಗಿದೆ.
ಶಿವಕುಮಾರ್ ಅಡ್ಮಿಟ್ ಹಿನ್ನಲೆಯಲ್ಲಿ ಆರ್.ಎಂ.ಎಲ್. ಆಸ್ಪತ್ರೆಯ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತಿಹಾರ್ ಜೈಲಿನ ಮೂರನೇ ಬೆಟಾಲಿಯನ್ ಆಸ್ಪತ್ರೆಯ ಆವರಣದಲ್ಲೇ ಬೀಡುಬಿಟ್ಟಿದೆ. ಮಾತ್ರವಲ್ಲದೇ ಶಿವಕುಮಾರ್ ಅವರನ್ನು ಜೈಲಿಗೆ ಕರೆದೊಯ್ಯಲು ಬಂದಿದ್ದ ಜೈಲು ವಾಹನವನ್ನೂ ಸಹ ಆಸ್ಪತ್ರೆಯ ಆವರಣದಲ್ಲೇ ಇರಿಸಲಾಗಿದೆ.
ವೈದ್ಯರ ವಿರುದ್ಧ ಡಿಕೆ ಗರಂ!
ಆರ್.ಎಂ.ಎಲ್. ಆಸ್ಪತ್ರೆಯಲ್ಲಿ ಶಿವಕುಮಾರ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವೈದ್ಯರ ಮೇಲೆ ಕೈ ನಾಯಕ ಗರಂ ಆಗಿ ರೇಗಿದ ಘಟನೆ ನಡೆದಿದೆ. ಶಿವಕುಮಾರ್ ಅವರ ವೈದ್ಯಕೀಯ ತಪಾಸಣೆಯನ್ನು ಮುಗಿಸಿದ ಬಳಿಕ ಆಸ್ಪತ್ರೆಯ ವೈದ್ಯರು ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸುತ್ತಿದ್ದರು. ಇದರಿಂದ ಕೋಪಗೊಂಡ ಶಿವಕುಮಾರ್ ಅವರು ವೈದ್ಯರ ವಿರುದ್ದ ತಮ್ಮ ಸಿಟ್ಟನ್ನು ಹೊರಹಾಕಿದರು.
ನಿಮ್ಮ ಅನುಕಂಪ ನನಗೆ ಬೇಕಾಗಿಲ್ಲ, ವಾಸ್ತವ ಏನಿದೆಯೋ ಆ ವರದಿಯನ್ನು ನೀಡಿ. ನನಗೇನೂ ಆರೋಗ್ಯ ಸಮಸ್ಯೆ ಇಲ್ಲ ಎಂದೇ ವರದಿ ನೀಡಿ, ನಾನು ತಿಹಾರ್ ಜೈಲಿಗೆ ಹೋಗುತ್ತೇನೆ ಎಂದು ಶಿವಕುಮಾರ್ ಅವರು ವೈದ್ಯರ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದರು ಎಂದು ತಿಳಿದುಬಂದಿದೆ.