ಇಸ್ಲಾಮಾಬಾದ್ : ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ಪನಾಮಾ ಗೇಟ್ ಭ್ರಷ್ಟಾಚಾರ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಇಂದು ಅತ್ಯಂತ ಬಿಗಿ ಭದ್ರತೆಯಲ್ಲಿ ಆರಂಭಿಸಿದೆ.
ಸುಪ್ರೀಂ ಕೋರ್ಟ್ ಪಹರೆಗೆ 700 ಪೊಲೀಸರನ್ನು ಹಾಗೂ ರೇಂಜರ್ ಸಿಬಂದಿಗಳನ್ನು ನಿಯೋಜಿಸಲಾಗಿದೆ. ಸ್ಥಳೀಯಾಡಳಿತೆಯ ಅನೇಕ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದಾರೆ.
ನವಾಜ್ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ಪನಾಮಾ ಗೇಟ್ ಭ್ರಷ್ಟಾಚಾರ ಹಗರಣದ ಕುರಿತ ಅಂತಿಮ ವರದಿಯನ್ನು ಕಳೆದ ವಾರವಷ್ಟೇ ಜಂಟಿ ತನಿಖಾ ವರದಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿತ್ತು.
ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ಘೋಷಿತ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಂಪತ್ತು ವಿದೇಶದಲ್ಲಿ ಕೂಡಿಟ್ಟಿರುವುದಾಗಿ ಸುಪ್ರೀಂ ಕೋರ್ಟಿನಿಂದಲೇ ನೇಮಕಗೊಂಡಿದ್ದ ಜೆಐಟಿ ತನ್ನ ಅಂತಿಮ ವರದಿಯಲ್ಲಿ ಹೇಳಿದೆ.
ಆರು ಸದಸ್ಯರ ಜಂಟಿ ತನಿಖಾ ತಂಡವು 60 ದಿನಗಳ ಸುದೀರ್ಘ ತನಿಖೆಯನ್ನು ನಡೆಸಿದ ಕಳೆದ ಜು.10ರಂದು 67ರ ಹರೆಯದ ಪಾಕ್ ಪ್ರಧಾನಿ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪನಾಮಾ ಗೇಟ್ ಹಗರಣದ ವರದಿಯನ್ನು ಸಲ್ಲಿಸಿತ್ತು.