Advertisement

ಡಿ. 5: ಶಾಂತಿಮೊಗರು ಸೇತುವೆ ಅಧಿಕೃತ ಉದ್ಘಾಟನೆ

03:37 PM Dec 02, 2017 | |

ಸವಣೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ, ಆಲಂಕಾರು ಗ್ರಾಮದ ಶರವೂರು ಮಧ್ಯೆ ಶಾಂತಿಮೊಗರು ಕುಮಾರಧಾರಾ ನದಿಗೆ ಅಡ್ಡಲಾಗಿ ರೂ. 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಡಿ. 5ರಂದು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

Advertisement

ಸುಮಾರು 14 ಕೋಟಿ ರೂ. ವೆಚ್ಚದ 9 ಪಿಲ್ಲರ್‌ಗಳಿರುವ ಈ ಸೇತುವೆ ಸುಮಾರು 220 ಮೀ. ಉದ್ದ, 12 ಮೀ. ಅಗಲ, 18 ಮೀ. ಎತ್ತರವಿದೆ. 1 ಮೀ. ಅಗಲದ ಫುಟ್‌ಪಾತ್‌ ಹೊಂದಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕೃತ ಉದ್ಘಾಟನೆಗೂ ಮುನ್ನವೇ ಅಂದರೆ ಜು. 12ರಂದು ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಸಚಿವ ಎಚ್‌.ಸಿ. ಮಹದೇವಪ್ಪ ಅವರು ಈ ಸೇತುವೆಯನ್ನು ಡಿ. 5ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಕೆ.ಪಿ.ಸಿ.ಸಿ. ಸದಸ್ಯ, ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ| ಬಿ. ರಘು ತಿಳಿಸಿದ್ದಾರೆ.

ಹತ್ತಿರ ಹತ್ತಿರ
ಮೈಸೂರು, ಮಡಿಕೇರಿ, ಸುಳ್ಯ, ಬೆಳ್ಳಾರೆ, ಸವಣೂರು, ಕಾಣಿಯೂರು ಭಾಗದ ಜನರಿಗೆ ಪುಣ್ಯಕ್ಷೇತ್ರ ಧರ್ಮಸ್ಥಳ, ಉಜಿರೆ ಕನ್ಯಾಡಿ ಶ್ರೀ ರಾಮಮಂದಿರ, ಉಪ್ಪಿನಂಗಡಿ, ಕೊಟ್ಟಿಗೆಹಾರ, ಮೂಡಿಗೆರೆ ಸಂಪರ್ಕಿಸಲು ಬಹಳ ಹತ್ತಿರವಾಗಿದೆ. ಕುದ್ಮಾರು, ಕಾಣಿಯೂರು, ಸವಣೂರು ಭಾಗದ ಜನರು ನಾಡಕಚೇರಿ ಕಡಬವನ್ನು ಸಂಪರ್ಕಿಸಲು ಹಾಗೂ ಕಡಬ, ಆಲಂಕಾರು, ಶರವೂರು ಭಾಗದ ಜನರು ಸವಣೂರು, ಪುತ್ತೂರು ಸಂಪರ್ಕಿಸಲು ಅನುಕೂಲವಾಗಿದೆ.

ಈ ಸೇತುವೆ ನಿರ್ಮಾಣಕ್ಕೆ ಅನುದಾನ ದೊರಕುವಲ್ಲಿ ಶಾಸಕರು, ಸಚಿವರು, ಮುಖ್ಯಮಂತ್ರಿಯಾದಿಯಾಗಿ ಎಲ್ಲರ ಬೆನ್ನು ಬಿದ್ದು ಕೆಲಸ ಮಾಡಿದ ವ್ಯಕ್ತಿಯೊಬ್ಬರಿದ್ದಾರೆ ಅವರೇ ರಮೇಶ್‌ ಭಟ್‌ ಉಪ್ಪಂಗಳ. ಕಳೆದ ಹದಿನಾರು ವರ್ಷಗಳಿಂದ ಸೇತುವೆ ನಿರ್ಮಾಣದ ಕನಸು ಹೊತ್ತು ಸುಳ್ಯ ಶಾಸಕ ಎಸ್‌.ಅಂಗಾರರ ಮುಂದಾಳತ್ವದಲ್ಲಿ ನಿರಂತರವಾಗಿ ಅಧಿಕಾರಿಗಳು ಮತ್ತು ಸರಕಾರದ ಸಂಪರ್ಕ ಸಾಧಿಸಿ ಕೊನೆಗೂ ಅನುದಾನ ಬಿಡುಗಡೆಗೊಳ್ಳುವಂತೆ ಮಾಡಿದ್ದರು. 

ಅಂದಿನ ಲೋಕೋಪಯೋಗಿ ಸಚಿವರಾದ ಸಿ.ಎಂ. ಉದಾಸಿ ಅವರನ್ನು ಶಾಂತಿಮೊಗರಿಗೆ ಕರೆಸಿ ಸ್ಥಳ ಪರಿಶೀಲನೆ ನಡೆಸಿ
ಸೇತುವೆಯ ಭರವಸೆಯ ಪಡೆಯುವಲ್ಲಿ ಹಿಂದಿನ ಶ್ರಮ ಪ್ರಮುಖವಾದದ್ದು.

Advertisement

ಜು. 12ರಿಂದ ಸಂಚಾರಕ್ಕೆ ಮುಕ್ತ
ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಅವಕಾಶವಿಲ್ಲದಿದ್ದರಿಂದ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದರಾಗಿದ್ದರು. ಈ ವಿಚಾರ ಅರಿತ ಶಾಸಕ ಎಸ್‌.ಅಂಗಾರ ಅವರು ಇಲಾಖಾಧಿಕಾರಿಗಳ ಜತೆ ಮಾತುಕತೆ ನಡೆಸಿ ಜು. 12ರಂದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಸಬ್‌ಸ್ಟೇಷನ್‌ ವಿಚಾರದಲ್ಲೂ ಹೀಗೆ ಆಗಿತ್ತು
2011ರ ಡಿಸೆಂಬರ್‌ನಲ್ಲಿ ಸವಣೂರು ವಿದ್ಯುತ್‌ ಸಬ್‌ಸ್ಟೇಷನ್‌ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗಿರಲಿಲ್ಲ. ಆದರೆ ವಿದ್ಯುತ್‌ ಸರಬರಾಜು ಆರಂಭಿಸಲಾಗಿತ್ತು. ಬಳಿಕ ಸಬ್‌ಸ್ಟೇಷನ್‌ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು 2012ರ ಸೆಪ್ಟೆಂಬರ್‌ನಲ್ಲಿ. ಅದೇ ರೀತಿಯ ವಿದ್ಯಾಮಾನ ಸೇತುವೆ ಉದ್ಘಾಟನೆಯ ವಿಷಯದಲ್ಲೂ ಅನುಕರಣೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next