ಮಡಿಕೇರಿ: ಸೇವೆಯಲ್ಲಿರುವ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಕೇಂದ್ರ ಮತ್ತು ರಾಜ್ಯ ಸರರ್ಕಾರಗಳು ನೀಡುತ್ತಿರುವ ವಿವಿಧ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ಕೆ ಬಿಜೆಪಿಯ ಸೈನಿಕ ಪ್ರಕೋಷ್ಠ ಮುಂದಾಗಿದೆ. ಡಿ. 29 ರಂದು ಸೈನಿಕ ಪ್ರಕೋಷ್ಠ ಸೈನಿಕರ ಮನೆ ಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದೆಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಮೇಜರ್ ಓ.ಎಸ್. ಚಿಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸೈನಿಕ ವರ್ಗ ಹಾಗೂ ಅವರನ್ನು ಅವಲಂಬಿಸಿರುವವರು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಸೈನಿಕ ಪ್ರಕೋಷ್ಠದ ಮೂಲಕ ಪ್ರತಿಯೊಬ್ಬ ಸೈನಿಕರ ಮನೆಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರಕೋಷ್ಠದಲ್ಲಿ 34 ಮಂದಿ ಕ್ರಿಯಾಶೀಲ ಸದಸ್ಯರಿದ್ದು, ಈ ಸದಸ್ಯರುಗಳು ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ಪಂಚಾಯತ್‌ಮಟ್ಟದಲ್ಲಿರುವ ಸೈನಿಕರ ಮನೆಗೆ ಭೇಟಿ ನೀಡಲಾಗುವುದು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇವೆಯಲ್ಲಿರುವ ಸೈನಿಕರಿಗೆ, ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಶ್ರೇಣಿ ಒಂದು ಹುದ್ದೆ ವೇತನದ ವ್ಯವಸ್ಥೆ ಅನುಷ್ಠಾನಗೊಂಡು ಒಂದು ವರ್ಷ ಕಳೆದಿದ್ದರು ಕೆಲವರಿಗೆ ಇದರ ಲಾಭ ದೊರೆತ್ತಿಲ್ಲ. ಬ್ಯಾಂಕ್‌ಗಳಿಗೆ ಸರ್ಕಾರದಿಂದ ಹಣ ಸಂದಾಯವಾಗಿದ್ದರು ಹಣವನ್ನು ಬ್ಯಾಂಕ್ ಬಿಡುಗಡೆ ಮಾಡುತ್ತಿಲ್ಲ. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ವರ ಪಿಂಚಣಿ 6 ಸಾವಿರ ರೂ. ಗೆ ಏರಿಕೆ ಮಾಡಲಾಗಿದ್ದು, ಈ ಬಗ್ಗೆ ಕೆಲವರಿಗೆ ಮಾಹಿತಿಯೇ ಇಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎನ್ನುವ ಮಾತಿ ನಂತೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದರೂ ಬ್ಯಾಂಕ್ ನೀಡುತ್ತಿಲ್ಲ ವೆಂದು ಚಿಂಗಪ್ಪ ಆರೋಪಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದ ಅಭ್ಯುದಯಕ್ಕೆ ಪೂರಕವಾಗಿದೆ. ರಾಜ್ಯ ಸರ್ಕಾರ ಕೂಡ ಕೆಲವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಇವುಗಳನ್ನು ಸೈನಿಕರ ಮನೆಮನೆಗೆ ತಿಳಿಸುವ ಅಗತ್ಯವಿದೆ. ಮಾಜಿ ಸೈನಿಕರ ಸಂಘ ಈ ಕಾರ್ಯವನ್ನು ಮಾಡದಿರುವುದರಿಂದ ಬಿಜೆಪಿ ಪ್ರಕೋಷ್ಠದ ಮೂಲಕ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಚಿಂಗಪ್ಪ ಸ್ಪಷ್ಟಪಡಿಸಿದರು.
ಈಗಾಗಲೆ ಪ್ರತಿ ಗ್ರಾಮದಲ್ಲಿರುವ ಮಾಜಿ ಸೈನಿಕರ ಕುಟುಂಬಗಳನ್ನು ಗುರುತಿಸಲಾಗುತ್ತಿದ್ದು, ಮುಂದಿನ ಆರು ತಿಂಗಳೊಳಗೆ ಮನೆ ಮನೆ ಭೇಟಿ ಕಾರ್ಯಕ್ರಮ ಮುಕ್ತಾಯವಾಗಲಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಸೈನಿಕರಿಗೆ ಹೆಚ್ಚು ಅನುಕೂಲವಾಗಿದ್ದು, ಇದೇ ಕಾರಣಕ್ಕೆ ಬಿಜೆಪಿ ಪ್ರಕೋಷ್ಠದ ಮೂಲಕವೆ ಈ ಕಾರ್ಯವನ್ನು ಕೈಗೆತ್ತಿಕೊಂಡಿರುವುದಾಗಿ ಚಿಂಗಪ್ಪ ಹೇಳಿದರು.
ಡಿ. 29ರಂದು ನಗರದ ಬಾಲಭವನ ದಲ್ಲಿ ಬೆಳಗ್ಗೆ 11 ಗಂಟೆಗೆ ಸೈನಿಕರ ಮನೆಮನೆಗೆ ಕಾರ್ಯಕ್ರಮ ಮತ್ತು ಪ್ರಕೋಷ್ಠದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಶಾಸಕರಾದಿ ಯಾಗಿ ಪಕ್ಷದ ಎಲ್ಲ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. ಸಭೆೆಯಲ್ಲಿ ಪ್ರಕೋಷ್ಠಕ್ಕೆ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲಾಗುವುದೆಂದು ಮೇಜರ್ ಚಿಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹ ಸಂಚಾಲಕ ಕುಟ್ಟಂಡ ನಂದ ಮಾದಪ್ಪ, ಮಡಿಕೇರಿ ತಾಲ್ಲೂಕು ಸಂಚಾಲಕ ಮಾದೆಯಂಡ ನಾಚಪ್ಪ, ಅಗರಿಮನೆ ವಾಸಪ್ಪ, ಸೋಮವಾರಪೇಟೆ ಸಂಚಾಲಕ ಪಿ.ಎನ್. ಗಂಗಾಧರ ಹಾಗೂ ವೀರಾಜಪೇಟೆ ಸಂಚಾಲಕ ಪಟ್ರಪಂಡ ಕರುಂಬಯ್ಯ ಉಪಸ್ಥಿತರಿದ್ದರು.