ಸೈರಸ್ ಮಿಸ್ತ್ರಿ ಅವರು 1968ರ ಜು.4ರಂದು ಮುಂಬಯಿಯಲ್ಲಿ ಜನಿಸಿದವರು. ಪ್ರಸಿದ್ಧ ಉದ್ಯಮಿ ಹಾಗೂ ಕೋಟ್ಯಧಿಪತಿ ಪಲ್ಲೋಂಜಿ ಮಿಸ್ತ್ರಿ ಅವರ ಎರಡನೇ ಪುತ್ರ. ತಂದೆ-ತಾಯಿ ಇಬ್ಬರೂ ಐರ್ಲೆಂಡ್ ಪೌರತ್ವ ಪಡೆದಿದ್ದ ಹಿನ್ನೆಲೆ ತಾವೂ ಆ ದೇಶದ ನಾಗರಿಕತೆ ಪಡೆದಿದ್ದರು.
ಮುಂಬಯಿಯ ಕ್ಯಾಥೆಡ್ರಾಲ್ ಆ್ಯಂಡ್ ಜಾನ್ ಕ್ಯಾನನ್ ಶಾಲೆಯಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಪಡೆದು, ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ಸೈರಸ್ 1990ರಲ್ಲಿ ಟಾಟಾ ಎಲ್ಕಿಯ ನಿರ್ದೇಶಕರಾಗಿ ಟಾಟಾ ಗ್ರೂಪ್ಸ್ ಸಂಸ್ಥೆಯೊಳಗೆ ಕಾಲಿಟ್ಟರು. 2009ರ ವರೆಗೂ ಆ ಹುದ್ದೆಯಲ್ಲಿ ಮುಂದುವರಿದರು. 2006ರ ವರೆಗೆ ಟಾಟಾ ಪವರ್ ಸಮಿತಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. 2006ರಲ್ಲಿ ಅವರ ತಂದೆಯು ಟಾಟಾ ಸನ್ಸ್‌ನ ಸಮಿತಿಯಿಂದ ನಿವೃತ್ತರಾದ ಅನಂತರ ಸೈರಸ್ ಮಿಸಿŒ ತಂದೆಯ ಸ್ಥಾನಕ್ಕೇರಿದರು. ಸೈರಸ್ ಅವರ ತಂದೆಯವರು ಜೂ.28ರಂದು ನಿಧನರಾಗಿದ್ದರು.
ಮುಖ್ಯಸ್ಥರಾಗಿ ಆಯ್ಕೆ: 2013ರಲ್ಲಿ ಸೈರಸ್ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಯದಲ್ಲಿ ಅವರು ಟಾಟಾದ ಹಲವು ಅಂಗಸಂಸ್ಥೆಗಳಿಗೂ ಅಧ್ಯಕ್ಷರಾಗಿದ್ದರು. 2016ರ ಅ.24ರಂದು ಸೈರಸ್‌ರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ನಿರ್ಧಾರವಾಯಿತು. ಈ ವಿಚಾರವಾಗಿ ಸೈರಸ್ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ಮಂಡಳಿ(ಎನ್‌ಸಿಎಲ್‌ಎಟಿ)ಗೆ ಮನವಿ ಸಲ್ಲಿಸಿದ್ದರು. 2018ರ ಜು.9ರಂದು ಮಿಸ್ತ್ರಿ ಅವರ ಅರ್ಜಿಯನ್ನು ವಜಾ ಮಾಡಿತು. ಅದೇ ಅವಧಿಯಲ್ಲಿ ನಟರಾಜನ್ ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸ ಲಾಗಿತ್ತು. ಮಂಡಳಿ ಅವರ ನೇಮಕವನ್ನು ಎನ್‌ಸಿಎಲ್‌ಎಟಿ ಅಕ್ರಮ ಎಂದು ಘೋಷಿಸಿತು.
ಈ ವಿಚಾರವಾಗಿ ಟಾಟಾ ಸನ್ಸ್ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆದರೆ ಸೈರಸ್ ಅವರೇ ಒಂದು ಹೆಜ್ಜೆ ಹಿಂದೆ ಬಂದು, “ನನಗೆ ಅಧ್ಯಕ್ಷನ ಹುದ್ದೆ ಬೇಡ. ಆದರೆ ಮಂಡಳಿಯಲ್ಲಿ ಸ್ಥಾನ ನೀಡಲಿ’ ಎಂದು ಕೋರಿದ್ದರು. ಸುಪ್ರೀಂ ಕೋರ್ಟ್ ಎನ್‌ಸಿಎಲ್‌ಎಟಿ ತೀರ್ಪನ್ನು ತಡೆಹಿಡಿಯಿತು. ಸೈರಸ್ ಮಿಸ್ತ್ರಿ ನಿಧನದಿಂದ ಟಾಟಾ ಗ್ರೂಪ್ ಜತೆಗಿನ ಕಾನೂನು ಹೋರಾಟ ಮುಕ್ತಾಯ ಕಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟಾಟಾದಲ್ಲಿ ಪಾಲುದಾರಿಕೆ
ಟಾಟಾ ಸಂಸ್ಥೆಯ ಅತಿ ದೊಡ್ಡ ಪ್ರಮಾಣದ ಷೇರು ಪಡೆದವರ ಪಟ್ಟಿಯಲ್ಲಿ ಸೈರಸ್ ಕುಟುಂಬ ಮೊದಲಿದೆ. ಸೈರಸ್ ಅವರ ತಾತ ಶಪೂರ್ಜಿ ಪಲ್ಲೊಂಜಿ 1930ರ ಕಾಲದಲ್ಲಿಯೇ ಟಾಟಾ ಸನ್ಸ್ ಷೇರನ್ನು ಖರೀದಿಸಿದ್ದರು. ಸೈರಸ್ ಕುಟುಂಬವು ಟಾಟಾ ಸನ್ಸ್‌ನ ಶೇ.18.37 ಷೇರು ಹೊಂದಿದೆ. ಮಿಸ್ತ್ರಿನಿಧನಕ್ಕೆ ಉದ್ಯಮ ಸೇರಿ ಹಲವು ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.