ಜೊಹನ್ಸ್‌ಬರ್ಗ್: ಹಲವು ಹಗರಣಗಳ ಆರೋಪ ಹೊತ್ತಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ, ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ಮುಖಂಡರ ಜೊತೆಗಿನ ತಿಕ್ಕಾಟದಲ್ಲಿ ಹುದ್ದೆ ತೊರೆದಿದ್ದಾರೆ. ಅವರ ಸ್ಥಾನಕ್ಕೆ ಸಿರಿಲ್ ರಾಮಫೋಸಾ ಹೊಸ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಎಎನ್‌ಸಿ ಮುಖಂಡರು ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಹೇಳಿದ ನಂತರದಲ್ಲಿ ಬುಧವಾರ ಜುಮಾ ಪದತ್ಯಾಗ ಮಾಡಿದ್ದಾರೆ. ಒಂಬತ್ತು ವರ್ಷಗಳವರೆಗೆ ದ. ಆಫ್ರಿಕಾವನ್ನು ಆಳಿದ ಜುಮಾ ಅಧಿಕಾರಾವಧಿ ಮುಂದಿನ ವರ್ಷ ಮುಕ್ತಾಯವಾಗುತ್ತಿತ್ತು. ಈ ಹಿಂದೆ ಹಲವು ಬಾರಿ ಜುಮಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರಯತ್ನಿಸಲಾಗಿತ್ತಾದರೂ, ಈ ಬಾರಿ ಆಡಳಿತ ಪಕ್ಷದ ಮುಖಂಡರೇ ಬೆಂಬಲ ನೀಡಿರುವುದರಿಂದ ಜುಮಾರನ್ನು ಹುದ್ದೆಯಿಂದ ವಜಾಗೊಳಿಸುವುದು ಖಚಿತವಾಗಿತ್ತು. ಸಾಂವಿಧಾನಿಕವಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೂ ರಾಮಫೋಸಾ ಹಂಗಾಮಿ ಅಧ್ಯಕ್ಷರಾಗಿ ಮುದುವರಿಯಲಿದ್ದಾರೆ. ಈ ಮಧ್ಯೆ ಕಳೆದ ಕೆಲವು ವರ್ಷಗಳಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಸೇರಿದಂತೆ ಹಲವು ಆರೋಪಗಳು ಜುಮಾ ವಿರುದ್ಧ ಕೇಳಿಬಂದಿವೆ.