ಇಡೀ ಜಗತ್ತೇ ಹಣದುಬ್ಬರದ ಕಪಿಮುಷ್ಟಿಗೆ ಸಿಲುಕಿ ಒದ್ದಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ನೆರೆಯ ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ ಸಹಿತ ಹಲವಾರು ದೇಶಗಳು ಈ ಹಣದುಬ್ಬರದ ಹೊಡೆತಕ್ಕೆ ಸಿಲುಕಿ ಕಕ್ಕಾಬಿಕ್ಕಿಯಾಗಿವೆ. ದೂರದ ಅಮೆರಿಕ, ಇಂಗ್ಲೆಂಡ್, ಐರೋಪ್ಯ ಒಕ್ಕೂಟದ ದೇಶಗಳೂ ಇದಕ್ಕೆ ಹೊರತೇನಲ್ಲ.
ಈ ಹಣದುಬ್ಬರ ಎದುರಿಸುವುದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ಬೇಡಿಕೆಯನ್ನು ತಗ್ಗಿಸುವ ಕೆಲಸವನ್ನೂ ಅದು ಮಾಡುತ್ತಿದೆ. ಅಂದರೆ ರೆಪೋ ದರ ಹೆಚ್ಚಳದ ಮೂಲಕ ಜನ ಹೆಚ್ಚೆಚ್ಚು ಸಾಲದ ಮೊರೆ ಹೋಗಬಾರದು ಎನ್ನುವ ದೃಷ್ಟಿಯಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ಈ ಸಂಗತಿಗಳನ್ನು ಹೇಳಲು ಕಾರಣವೂ ಇದೆ. ನಿಗದಿಯಂತೆಯೇ ಮಾ.1ರ ತೈಲ ದರ ಪರಿಷ್ಕರಣೆಯಲ್ಲಿ ಗೃಹ ಬಳಕೆ ಸಿಲಿಂಡರ್ ದರವನ್ನು 50 ರೂ. ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು 350.50 ರೂ.ನಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಗೃಹ ಬಳಕೆ ಸಿಲಿಂಡರ್ ದರ ಬೆಂಗಳೂರಿನಲ್ಲಿ 1,105.50 ರೂ. ಆಗಿದ್ದರೆ, ವಾಣಿಜ್ಯ ಬಳಕೆ ಸಿಲಿಂಡರ್ ದರ 2,190.50 ರೂ.ಗೆ ತಲುಪಿದೆ. ಈ ದರ ಏರಿಕೆಯ ಪೆಟ್ಟು ಅಡುಗೆ ಮನೆಯೊಳಗಿನ ಗೃಹಿಣಿಯ ಬಜೆಟ್‌ನಿಂದ ಹಿಡಿದು, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಂಥ ನಗರಗಳಲ್ಲಿ ಕೆಲಸ ಮಾಡುತ್ತಿರುವ, ಹೊಟೇಲ್ ಊಟವನ್ನೇ ನಂಬಿಕೊಂಡಿರುವ ಅಸಂಖ್ಯಾಕ ಮಂದಿಗೂ ಬೀಳಲಿದೆ.
ತೈಲ ದರ ಏರಿಕೆ ಎಂಬುದು ಒಂದು ರೀತಿಯಲ್ಲಿ ವೃತ್ತಾಕಾರದಂತೆ. ಇದರಲ್ಲಿ ಯಾರೋ ಒಬ್ಬರಿಗೆ ಏಟು ಬಿದ್ದು, ಉಳಿದವರು ಆರಾಮಾಗಿರಬಹುದು ಎಂಬುದು ಸುಳ್ಳು. ಸಿಲಿಂಡರ್ ದರ ಏರಿಕೆಯಿಂದಾಗಿ ಒಬ್ಬ ಶ್ರೀಸಾಮಾನ್ಯ ಅಥವಾ ಆತನ ಕುಟುಂಬದ ಬಜೆಟ್ ಮೇಲೆ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ.
Related Articles
ಮೊದಲೇ ಹೇಳಿದ ಹಾಗೆ, ಹಣದುಬ್ಬರದ ಕಾಲದಲ್ಲಿ ಸಿಲಿಂಡರ್ ದರ ಏರಿಕೆ ಮಾಡುವ ನಿರ್ಧಾರ ಒಳ್ಳೆಯದಲ್ಲ. ಇದೊಂದು ರೀತಿ ಕಷ್ಟಕಾಲದಲ್ಲಿ ಗಾಯದ ಮೇಲೆ ಬರೆ ಎಳೆದ ಹಾಗೆ. ಅಲ್ಲದೆ, ಹಣದುಬ್ಬರ ನಿಯಂತ್ರಣದ ಅವಧಿಯಲ್ಲೇ ಜನಸಾಮಾನ್ಯರ ತೀರಾ ಅಗತ್ಯಕ್ಕೆ ಬೇಕಾದವುಗಳ ದರ ಏರಿಕೆ ಮಾಡಿದರೆ, ಅದರಿಂದ ಜನರಿಗೆ ದೊಡ್ಡ ಪ್ರಮಾಣದ ಅನಾನುಕೂಲಗಳಾಗಲಿವೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬಹುದು.
ಹಾಗೆಯೇ ಇದು ತೀರಾ ಲಾಭ ಮತ್ತು ನಷ್ಟದ ವಿಚಾರವೇನಲ್ಲ. ಸುಖೀ ರಾಜ್ಯ ಅಥವಾ ಕ್ಷೇಮ ರಾಜ್ಯದ ಪರಿಕಲ್ಪನೆಯಲ್ಲಿ ಈ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುವುದು ಅಸಮಂಜಸ. ಜತೆಗೆ, ಜುಲೈನಿಂದ ಏರಿಕೆಯನ್ನೇ ಮಾಡಿರಲಿಲ್ಲ, ಈಗ ಮಾಡಿದ್ದೇವೆ ಎಂದು ಹೇಳುವುದೂ ತರವಲ್ಲ. ಏಕೆಂದರೆ ಇದು ಬೇಡಿಕೆ ಸೃಷ್ಟಿಸಿ, ಲಾಭ ಮತ್ತು ನಷ್ಟದ ವ್ಯಾಪಾರ ಮಾಡುವ ಮಾರುಕಟ್ಟೆಯಂತೂ ಅಲ್ಲವೇ ಅಲ್ಲ. ಇದು ಸೇವೆ ಎಂಬುದನ್ನು ತಿಳಿದರೆ ಈ ಪ್ರಮಾಣದಲ್ಲಿ ದರ ಏರಿಕೆಯ ಆಸ್ಪದವೂ ಬರುವುದಿಲ್ಲ.
2022ರ ಮೇನಲ್ಲಿ 14 ಕೆ.ಜಿ. ಸಿಲಿಂಡರ್ ದರ 1,005 ರೂ. ಮುಟ್ಟಿತು. ಅಲ್ಲಿಂದ ಜೂನ್‌ನಲ್ಲಿ 1,055 ರೂ.ಗೆ ತಲುಪಿತು. ಈಗ ಈ ದರ 1,105 ರೂ.ಗೆ ಬಂದಿದೆ. ಹಾಗೆಯೇ ವಾಣಿಜ್ಯ ಸಿಲಿಂಡರ್ ದರದಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಒಂದೇ ಬಾರಿಗೆ 350 ರೂ. ಹೆಚ್ಚಳ ಮಾಡಿರುವುದು ಸಂಕಷ್ಟಕ್ಕೀಡು ಮಾಡಿದೆ. ಕರ್ನಾಟಕದ ಹೊಟೇಲ್ ಮಾಲಕರ ಸಂಘವೂ ಈ ದರ ಹೆಚ್ಚಳದ ವಿರುದ್ಧ ತೀವ್ರ ಆಕ್ರೋಶವನ್ನೇ ವ್ಯಕ್ತಪಡಿಸಿದೆ. ಆದರೆ ಸದ್ಯಕ್ಕೆ ಬೆಲೆ ಹೆಚ್ಚಳ ಮಾಡಲ್ಲ ಎಂಬುದು ಸಮಾಧಾನದ ಸಂಗತಿ.
ಏನೇ ಆಗಲಿ ನಮ್ಮನ್ನು ಆಳುವ ವ್ಯವಸ್ಥೆ ಜನರ ಪರವಾಗಿಯೇ ಇರಬೇಕು. ಆಗಷ್ಟೇ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಒಂದು ಅರ್ಥವಾದರೂ ಸಿಗುತ್ತದೆ. ಹೀಗಾಗಿ ಬೆಲೆ ಏರಿಕೆಯಂಥ ವಿಚಾರದಲ್ಲಿ ದೂರದೃಷ್ಟಿಯಿಂದ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಉತ್ತಮ.