ಮಂಗಳೂರು: ಸಮುದ್ರದ ಮಧ್ಯೆ ಮೀನುಗಾರಿಕಾ ದೋಣಿಯಲ್ಲಿ ಸಿಲಿಂಡರ್ ಸ್ಫೋಟಕೊಂಡು ಅಪಾಯಕ್ಕೆ ಸಿಲುಕಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.
ತಮಿಳುನಾಡು ಮೂಲದ ಮೀನುಗಾರಿಕಾ ನೌಕೆ ಮಂಗಳೂರಿ ನಿಂದ 140 ನಾಟಿಕಲ್ ಮೈಲಿ ಪಶ್ಚಿಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬೋಟ್‌ನಲ್ಲಿ ಬೆಂಕಿ ಆವರಿಸಿತು. ದೋಣಿಯವರು ಕೂಡಲೇ ಅಪಾಯದ ಸಂದೇಶವನ್ನು ಕೋಸ್ಟ್‌ಗಾರ್ಡ್‌ಗೆ ತಲುಪಿಸಿದರು.
ತತ್‌ಕ್ಷಣವೇ ಮುಂಬಯಿ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆ ಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಲ್ಲದೆ ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು.
ಬೋಟನ್ನು ಪತ್ತೆ ಮಾಡಿದ್ದಲ್ಲದೆ ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬಲಾಯಿತು. ಅದೇ ಸ್ಥಳಕ್ಕೆ ಕೋಸ್ಟ್‌ಗಾರ್ಡ್ ನೌಕೆಗಳೆರಡೂ ತಲುಪಿದ್ದು ತತ್‌ಕ್ಷಣವೇ ತೀವ್ರ ಗಾಯಗೊಂಡ ಓರ್ವನನ್ನು ಪ್ರಥಮ ಚಿಕಿತ್ಸೆಗೊಳಪಡಿಸಿ ಕೋಸ್ಟ್‌ಗಾರ್ಡ್ ನೌಕೆಗೆ ಸ್ಥಳಾಂತರಿಸಲಾಯಿತು.
ಗಾಯಗೊಂಡ ಒಬ್ಬ ಮೀನುಗಾರ ಹಾಗೂ ಇತರ ಮೂವರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.