ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಅಕ್ಟೋಬರ್ 17 ರಂದು(ಮಂಗಳವಾರ) ಅನ್ವಯವಾಗುವಂತೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆ ಲಕ್ಷದ್ವೀಪ ಪ್ರದೇಶ ಮತ್ತು ಪಕ್ಕದ ಆಗ್ನೇಯ ಅರಬ್ಬೀ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಯನ್ನು ಗುರುತಿಸಿದ್ದು, ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ. ಈ ಹವಾಮಾನ ವಿದ್ಯಮಾನ ಪ್ರಭಾವ ಬೀರುವ ನಿರೀಕ್ಷೆಯಿದೆ.ಈಗಾಗಲೇ ಸೋಮವಾರ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸುರಿದಿದೆ.
ಯೆಲ್ಲೋ ಅಲರ್ಟ್ 64.5 ರಿಂದ 115.5 ಮಿಲಿಮೀಟರ್‌ಗಳ ನಡುವೆ ನಿರೀಕ್ಷಿತ ಭಾರೀ ಮಳೆಯನ್ನು ಸೂಚಿಸುತ್ತದೆ. ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಕ್ಟೋಬರ್ 17 ರ ವೇಳೆಗೆ ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ನಿರೀಕ್ಷೆಯಿದ್ದು, 48 ಗಂಟೆಗಳಲ್ಲಿ ಚಂಡಮಾರುತದ ಪರಿಚಲನೆಯು ತೀವ್ರಗೊಳ್ಳುವ ಸಾಧ್ಯತೆಯಿದೆ. ಅಕ್ಟೋಬರ್ 21ರ ವರೆಗೆ ಹವಾಮಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಎಲ್ಲಾ ಬಂದರು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿದೆ.