ನವದೆಹಲಿ: ತೌಕ್ತೆ ಚಂಡಮಾರುತ ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಲಿದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್ ಡಿಆರ್ ಎಫ್) ತಂಡಗಳನ್ನು ನಿಯೋಜಿಸಿರುವುದಾಗಿ ಶುಕ್ರವಾರ(ಮೇ 14) ತಿಳಿಸಿದೆ.
ಇದನ್ನೂ ಓದಿ:ಸ್ಫುಟ್ನಿಕ್ v ಲಸಿಕೆ ಬೆಲೆ ಎಷ್ಟು? ಡಾ.ರೆಡ್ಡೀಸ್ ಲ್ಯಾಬ್ ನಿಂದ ಮೊದಲ ಲಸಿಕೆ ವಿತರಣೆ
ಹವಾಮಾನ ಇಲಾಖೆಯ ವರದಿ(ಐಎಂಡಿ) ಪ್ರಕಾರ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಮೇ 16ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ತೌಕ್ತೆ ಚಂಡಮಾರುತದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕರಾವಳಿ ಪ್ರದೇಶದ ಜನರು ರಾಜ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳು ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಅನುಸರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮೇ 14ರಂದು ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮೇ 15ರಂದು ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಕರಾವಳಿ ಪ್ರದೇಶದಲ್ಲಿ ಹವಾಮಾನ ಇಲಾಖೆಯ ಮಾರ್ಗಸೂಚಿ ಅನುಸರಿಸುವಂತೆ ಸಿಎಂ ತಿಳಿಸಿದ್ದಾರೆ.
ತೌಕ್ತೆ ಭೀಕರ ಚಂಡಮಾರುತವು ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ ಮತ್ತು ಮಹಾರಾಷ್ಟ್ರ ಕರಾವಳಿ ಪ್ರದೇಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೇಳಿದೆ. ಮೇ 14ರಿಂದ 17ರವರೆಗೆ ಮೀನುನಾರರು ಮೀನುಗಾರಿಕೆಗೆ ತೆರಳದಂತೆ ಐಎಂಡಿ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ.