ಚೆನ್ನೈ/ಹೊಸದಿಲ್ಲಿ: ಸೈಕ್ಲೋನ್ ನಿವಾರ್ ತಮಿಳುನಾಡು ಕರಾವಳಿ ಪ್ರದೇಶಕ್ಕೆ ಬುಧವಾರ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಜತೆಗೆ ಪ್ರತಿ ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ವಾಯುಭಾರ ಕುಸಿತದಿಂದಾಗಿ ಈ ಸೈಕ್ಲೋನ್ ಉಂಟಾಗಿದೆ. ಪುದುಶೇರಿಯ ಕಾರೈಕಲ್ ಮತ್ತು ಮಹಾ ಬಲಿಪುರಂ ಮೂಲಕ ಅದು ತಮಿಳುನಾಡನ್ನು ಹಾದು ಹೋಗಲಿದೆ. ತಮಿಳುನಾಡಿ ನಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಬುಧವಾರ ತಮಿಳು ನಾಡು ಮತ್ತು ಪುದುಶೇರಿಯಲ್ಲಿ ಸಾರ್ವಜನಿಕ ರಜೆ ಘೋಷಿಸಿದೆ.
ಸೈಕ್ಲೋನ್ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದಲ್ಲಿಯೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಕರಾವಳಿ ಪ್ರದೇಶ ರಾಯಲಸೀಮಾದಲ್ಲಿ ವಿಶೇಷ ರಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಲಸಿಕೆ ವಿತರಣೆಗೆ ನಡೆದಿದೆ ಸಿದ್ದತೆ: 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ
ಪ್ರಧಾನಿ ಭರವಸೆ
ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ಪುದುಶೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜತೆಗೆ ಮಾತುಕತೆ ಅಗತ್ಯ ಬೀಳುವ ಎಲ್ಲಾ ನೆರವನ್ನು ಕೇಂದ್ರ ಸರಕಾರ ನೀಡಲಿದೆ ಎಂದು ವಾಗ್ಧಾನ ಮಾಡಿದ್ದಾರೆ. ತಮಿಳುನಾಡಿನಾದ್ಯಂತ ಮಂಗಳವಾರದಿಂದಲೇ ಧಾರಾಕಾರ ಮಳೆಯಾಗುತ್ತಿದೆ. ರಾಜಧಾನಿ ಚೆನ್ನೈನಲ್ಲಿ ಮಳೆಯ ಪ್ರಭಾವದಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
1,200 ಸಿಬ್ಬಂದಿ
ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ದಳ (ಎನ್‌ಡಿಆರ್‌ಎಫ್) ತಮಿಳುನಾಡು, ಆಂಧ್ರಪ್ರದೇಶ, ಪುದುಶೇರಿಗಳಲ್ಲಿ 1, 200 ಸಿಬ್ಬಂದಿಯನ್ನು ವಿವಿಧ ರೀತಿಯ ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಿದೆ. ಜತೆಗೆ ಹೆಚ್ಚುವರಿಯಾಗಿ 800 ಮಂದಿಯನ್ನು ಕಾಯ್ದಿರಿಸಿ ಕೊಂಡಿದೆ. ಒಟ್ಟು ಮೂವತ್ತು ತಂಡಗಳ ಪೈಕಿ 12ನ್ನು ತಮಿಳುನಾಡಿನಲ್ಲಿ, ಆಂಧ್ರದಲ್ಲಿ 7, ಪುದುಶೇರಿಯಲ್ಲಿ 3 ತಂಡಗಳನ್ನು ನಿಯೋಜಿಸಿದೆ. ಬುಧವಾರ ಸಂಜೆಯ ಒಳಗಾಗಿ ಸೈಕ್ಲೋನ್ ಅತ್ಯಂತ ಬಿರುಸಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮಳೆ ಸಾಧ್ಯತೆ
ನಿವಾರ್ ಚಂಡಮಾರುತ ಪರಿಣಾಮವಾಗಿ ಕರ್ನಾಟಕದ ಬೆಂಗಳೂರು, ಕರಾವಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಂಜೆಯ ಬಳಿಕ ಮಳೆಯಾಗಲಿದೆ. ನಾಳೆ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.