Advertisement

Cyclone Fengal: ರಾಜಧಾನಿ, ಹಳೇ ಮೈಸೂರು ತತ್ತರ

02:02 AM Dec 03, 2024 | Team Udayavani |

ಬೆಂಗಳೂರು: ಫೈಂಜಾಲ್‌ ಚಂಡಮಾರುತದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು.

Advertisement

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಯಾದ್ಯಂತ ಧಾಕಾರಾರ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡದಲ್ಲಿ ಸಾಧಾರಣ ಮಳೆಯಾಗಿದೆ.

ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೋಲಾರ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಹಾಗೂ ಕರಾವಳಿ ಭಾಗದ ಕಾಸರಗೋಡು ಜಿಲ್ಲೆಯಲ್ಲಿ ಡಿ. 3ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಠಾತ್‌ ಮಳೆಗೆ ಕೃಷಿಕರು ಕಂಗಾಲು
ಹಠಾತ್‌ ಆಗಿ ಸುರಿದ ಮಳೆಗೆ ಕೃಷಿಕರೂ ಕಂಗಾಲಾಗಿದ್ದಾರೆ. ಕೆಲವು ಕಡೆ ಭತ್ತ ಕಟಾವು ಕಾರ್ಯದ ವೇಳೆ ಮಳೆ ಅಡ್ಡಿಪಡಿಸಿದೆ. ಗದ್ದೆಯಲ್ಲಿ ನೀರು ನಿಂತು ಕಟಾವಿಗೆ ಬಂದಿದ್ದ ಪೈರು ನೆಲಕ್ಕೊರಗಿದೆ. ಫಸಲಿಗೆ ಸಿದ್ಧವಾಗಿದ್ದ ಅಡಿಕೆಗೂ ಸಮಸ್ಯೆ ಉಂಟಾಯಿತು.

ಮೈಸೂರು ಜಿಲ್ಲೆಯಲ್ಲಿ ರವಿವಾರ ರಾತ್ರಿಯಿಂದಲೂ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಹಲವೆಡೆ ಸತತ ಮಳೆ ಸುರಿದಿದ್ದು, ಕಾರ್ಮಿಕರು, ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಯಿತು. ಭತ್ತ, ರಾಗಿ ಬೆಳೆ ಕಟಾವಿಗೆ ಬಂದಿದ್ದು, ಮಳೆಯಿಂದಾಗಿ ತೊಂದರೆ ಆಗಿದೆ. ಇನ್ನು ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕೈಕಟ್ಟಿ ಕೂರುವಂತಾಯಿತು.

Advertisement

ಪ್ರವಾಸಿಗರ ಆಸೆಗೆ ತಣ್ಣೀರು
ಸೋಮವಾರ ಮೈಸೂರು ಅರಮನೆ ನೋಡಲು ನೂರಾರು ಜನ ಆಗಮಿಸಿದ್ದರು. ಕೊಡೆ ಹಿಡಿದುಕೊಂಡೇ ಅರಮನೆ ಆವರಣ ಸುತ್ತಿದರು. ಗ್ರಾಮಾಂತರ ಬಸ್‌ ನಿಲ್ದಾಣದ ಮುಂದೆ ಹಾದು ಹೋಗಿರುವ ಬೆಂಗಳೂರು-ನೀಲಗಿರಿ ಹೆ¨ªಾರಿಯು ಕೆಸರು ಗುಂಡಿಯಂತೆ ಆಗಿತ್ತು.

ರಾಮನಗರ ಜಿಲ್ಲೆಯಲ್ಲಿ ತಮಿಳುನಾಡುಡಿಗೆ ಹೊಂದಿಕೊಂಡಂತೆ ಇರುವ ಕನಕಪುರ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿದಿದೆ. ಅಕಾಲಿಕ ಮಳೆಗೆ ರಾಗಿ ಬೆಳೆಗಾರರಿಗೆ ಆತಂಕ ತಂದಿದೆ. ಜಿಲ್ಲೆಯಲ್ಲಿ ಕಟಾವಿನ ಹಂತದಲ್ಲಿರುವ ರಾಗಿಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಕೆಲವೆಡೆ ರೈತರು ರಾಗಿಯನ್ನು ಕೊಯ್ಲು ಮಾಡಿ ಜಮೀನಿನಲ್ಲಿ ಇಟ್ಟಿದ್ದು, ಮಳೆಯಿಂದ ಇಡೀ ರಾಗಿ ಹಾಳಾಗುವ ಸಾಧ್ಯತೆಯಿದೆ.

ಮಂಡ್ಯ ಜಿಲ್ಲೆಯಲ್ಲಿ ರವಿವಾರ ಸಂಜೆಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ರೈತರು ಕಟಾವು ಮಾಡಿದ್ದ ಭತ್ತದ ಫಸಲು ಸಹ ನಾಶವಾಗಿದೆ.

ಮಂಡ್ಯ ನಗರ, ಮದ್ದೂರು, ಕೆ.ಆರ್‌. ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ತಾಲೂಕುಗಳ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ನಿರಂತರವಾಗಿ ಮಳೆ ಸುರಿಯಿತು. ಕೆಲಸಕ್ಕೆ ಹೋಗುವ ಕಾರ್ಮಿಕರು, ಸರಕಾರಿ ನೌಕರರು, ಸಿಬಂದಿ, ಕೂಲಿ ಕಾರ್ಮಿಕರಿಗೆ ತೊಂದರೆಯಾಯಿತು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕುಗಳಲ್ಲಿ ಮಳೆಗೆ ಜನ ಕಂಗಾಲಾದರು. ಸೋಮವಾರ ರಾತ್ರಿಯಿಂದಲೇ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಈಗಷ್ಟೇ ರೈತರು ರಾಗಿ, ಜೋಳ ಕೊçಲು ಮಾಡಿ ಸಂಸ್ಕರಣೆಗೆ ಸಿದ್ಧತೆ ಮಾಡುತ್ತಿರುವಾಗಲೇ ಬೆಳೆ ಮಳೆಗೆ ಸಿಲುಕಿದೆ. ಸತತ ಮಳೆಯಿಂದ ರಾಗಿ, ಜೋಳ ರೈತರ ಕೈ ತಪ್ಪುವ ಆತಂಕ ಎದುರಾಗಿದೆ.

ಚಾ.ನಗರದಲ್ಲಿ 96 ಮಿ.ಮೀ. ದಾಖಲೆ ಮಳೆ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿಯಲ್ಲಿ ಡಿ.1ರ ಬೆಳಗ್ಗೆ 8.30ರಿಂದ ಡಿ. 2ರ 8.30ರ ತನಕ 24 ಗಂಟೆಗಳ ಅವಧಿಯಲ್ಲಿ 96 ಮಿ.ಮೀ. ದಾಖಲೆ ಮಳೆಯಾಗಿದೆ. ಇದು ರಾಜ್ಯದಲ್ಲಿಯೇ ಹೆಚ್ಚು ಮಳೆಯಾಗಿರುವ ಗ್ರಾಮವಾಗಿದೆ.

ಕೆಆರ್‌ಎಸ್‌ಗೆ 5 ಸಾವಿರ ಕ್ಯುಸೆಕ್‌ ಒಳಹರಿವು
ಚಂಡಮಾರುತದಿಂದ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿಯೂ ನಿರಂತರ ಮಳೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ನಿಧಾನವಾಗಿ ಮತ್ತೆ ಹೆಚ್ಚಳವಾಗುತ್ತಿದೆ. 3 ಸಾವಿರ ಕ್ಯುಸೆಕ್‌ಗೆ ಇಳಿದಿದ್ದ ಒಳಹರಿವು ಸೋಮವಾರ ಬೆಳಗ್ಗೆಯಿಂದ 5 ಸಾವಿರ ಕ್ಯುಸೆಕ್‌ಗೆ ಏರಿಕೆ ಕಂಡಿದೆ. ಇದರಿಂದ ಜಲಾಶಯವು ಕಳೆದ 3 ತಿಂಗಳಿನಿಂದ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಮಳೆ ಮುಂದುವರಿದರೆ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next