Advertisement

Cyclone Fengal Effect: ಕರಾವಳಿ ಸೇರಿ ಹಲವೆಡೆ ಭಾರೀ ಮಳೆ; ನಾಳೆಯೂ ಆರೆಂಜ್‌ ಅಲರ್ಟ್‌!

05:32 PM Dec 02, 2024 | Team Udayavani |

ಬೆಂಗಳೂರು: ಫೈಂಜಲ್‌ ಚಂಡಮಾರುತ ತಮಿಳುನಾಡಿನಲ್ಲಿ ಭಾರೀ ಮಳೆ ಸುರಿಸಿ ಕೆಲವು ಅನಾಹುತ ಸೃಷ್ಟಿಸಿದ ಬಳಿಕ ಈಗ ರಾಜ್ಯದಲ್ಲೂ ಚಂಡಮಾರುತದ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲಾದ್ಯಂತ ಸೋಮವಾರ ಕೆಲವೆಡೆ ಭಾರೀ ಮಳೆಯಾಗಿದ್ದು, ಮಂಗಳವಾರವೂ (ಡಿ.3) ಮಳೆ ಮುಂದುವರಿಯುವುದರಿಂದ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Advertisement

ಐಎಂಡಿ ಅಧಿಕಾರಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು . ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ವರೆಗಿನ ಭಾರೀ ಮಳೆ ಮತ್ತು ಹಳದಿ ಎಚ್ಚರಿಕೆ ಎಂದರೆ 6 ಸೆಂ.ಮೀ ಮತ್ತು 11 ಸೆಂ.ಮೀ ವರೆಗೆ ಮಳೆಯಾಗುತ್ತದೆ. ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

ಕೊಡಗು, ಕಾಸರಗೋಡು ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ನಾಳೆ ರಜೆ:
ಫೈಂಜಲ್‌ ಚಂಡಮಾರುತದ ಕಾರಣ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ, ಕಾಲೇಜು (ಪದವಿ, ಸ್ನಾತಕೋತ್ತರ ಹೊರತು) ಗಳಿಗೆ ಡಿ.3ರ ಮಂಗಳವಾರ ಜಿಲ್ಲಾಧಿಕಾರಿ ವೆಂಕಟರಾಜ ರಜೆ ಘೋಷಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಎಲ್ಲ ವೃತ್ತಿ ಪರ ಕಾಲೇಜುಗಳ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಡಿ.3ರ ಮಂಗಳವಾರ ಜಿಲ್ಲಾಧಿಕಾರಿ ಇಂಪಶೇಖರ ರಜೆ ಘೋಷಿಸಿದ್ದಾರೆ. ಟ್ಯೂಷನ್ ಕೇಂದ್ರಗಳು, ಮದರಸಗಳಿಗೂ ರಜೆ ಅನ್ವಯವಾಗುತ್ತದೆ. ಮಾದರಿ ವಸತಿ ಶಾಲೆಗಳಿಗೆ ರಜೆ ಅನ್ವಯ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

ಸಮುದ್ರಕ್ಕೆ ತೆರಳದಂತೆ ಮೀನುಗಾರರರಿಗೆ ಸೂಚನೆ:
ಡಿ.2 ಮತ್ತು 3ರಂದು, ದಕ್ಷಿಣ ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 35 ಕಿಲೋಮೀಟರ್‌ನಿಂದ 45 ಕಿಮೀ ಅಥವಾ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು  ಮುನ್ಸೂಚನೆ ನೀಡಿದ್ದು ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಡಿಸೆಂಬರ್ 3ಕ್ಕೆ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next