Advertisement
ತಗಡಿನ ಸೂರನ್ನು ಅತ್ಯಂತ ಚಿಕ್ಕ, ದುರ್ಬಲ ಕ್ಲಾಂಪ್ ಗಳನ್ನು ಹಾಕಿ ಜೋಡಿಸಿದ್ದು ಪಶ್ಚಿಮ ಭಾಗಕ್ಕೆ ಸಿಮೆಂಟ್ ಸಾರಣೆಯನ್ನೂ ಮಾಡದೇ ಇರುವುದರಿಂದ ಗೋಡೆಗಳು ದುರ್ಬಲವಾಗಿವೆ. ಹಾಗಾಗಿ ಬೀಸಿದ ಗಾಳಿಗೆ ಅಂಗಡಿಗಳು ಕಿತ್ತೆಸೆಯಲ್ಪಟ್ಟಿವೆ. ಅಂಗಡಿಗಳಲ್ಲಿದ್ದ ಸೊತ್ತುಗಳು ಮಳೆ ನೀರಲ್ಲಿ ನೆನೆದಿವೆ. ಇತರ ಕೆಲವು ಅಂಗಡಿಗಳ ಗೋಡೆಗಳಲ್ಲಿ ಬಿರುಕು ಕಂಡಿದ್ದು ಕುಸಿಯುವ ಆತಂಕ ಎದುರಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ಸಂತ್ರಸ್ತರನ್ನು ಸಮಾಧಾನಿಸಿದರು. ‘ಇಂಥ ದುರ್ಬಲ ಅಂಗಡಿಗಳಲ್ಲಿ ಹೇಗೆ ವ್ಯಾಪಾರ ಮಾಡುವುದು? ನಮಗೆ 10 ಲಕ್ಷ ರೂ. ಜೀವವಿಮೆ ಕೊಡಿಸಿ’ ಎಂದು ತರಕಾರಿ ವ್ಯಾಪಾರಿ ರೋನಿ ಆಗ್ರಹಿಸಿದರು. ಇನ್ನೂ ಹಲವರು ತಮ್ಮ ಗೋಳನ್ನು ಹೇಳಿಕೊಂಡರು. ಶಾಸಕರ ಸೂಚನೆಯಂತೆ ಪ್ರವಾಸಿ ಮಂದಿರದಲ್ಲಿ ನಡೆದ ಸಂತ್ರಸ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಶೀನ ನಾಯಕ್ ಅವರು ಈ ಸಂತ್ರಸ್ತರಿಗೆ 5,000 ರೂ. ಪರಿಹಾರ ನೀಡಲು ಅವಕಾಶ ಇದೆ ಎಂದಾಗ ಶಾಸಕರು ಈ ಬಗ್ಗೆ ವಿಶೇಷ ಸಭೆ ಕರೆದು ಹೆಚ್ಚಿನ ಸಹಾಯಧನ ಒದಗಿಸುವ ಬಗ್ಗೆ ಪುರಸಭೆ ನಿರ್ಣಯ ಕೈಗೊಳ್ಳಬೇಕು ಎಂದರು. ಪ್ರಾಕೃತಿಕ ವಿಕೋಪದಡಿ ಸಹಾಯಧನ ಒದಗಿಸುವ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುವುದಾಗಿ ಹೇಳಿದರು. ಎಂಜಿನಿಯರ್ ದಿನೇಶ್ ಕುಮಾರ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಹೊಸ ಮಾರುಕಟ್ಟೆ ನಿರ್ಮಾಣದ ಗುತ್ತಿಗೆದಾರರು ಉಪಸ್ಥಿತರಿದ್ದರು.