Advertisement

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

10:25 PM Jun 07, 2023 | Team Udayavani |

ಮಂಗಳೂರು: ಬಿಪೊರ್ ಜಾಯ್ ಚಂಡಮಾರುತದ ಪರಿಣಾಮ ಇದೇ ಜೂನ್ 11ರವರೆಗೆ ಮುಂದುವರಿಯಲಿರುವ ಕಾರಣ ಹಾಗೂ ಇದೇ ವೇಳೆಯಲ್ಲಿ ಮುಂಗಾರು ಆರಂಭವಾಗಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮಾನವ ಹಾಗೂ ಜಾನುವಾರುಗಳ ಪ್ರಾಣಹಾನಿಯಾಗದಂತೆ ಕಟ್ಟೆಚ್ಚರ ವಹಿಸುವಂತೆ ರಾಜ್ಯ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಅವರಿಗೆ ನಿರ್ದೇಶನ ನೀಡಿದ್ದಾರೆ.

Advertisement

ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ

ಜೂ.7 (ಬುಧವಾರ) ಸಂಭಾವ್ಯ ಪ್ರತಿಕೂಲ ಪರಿಸ್ಥಿತಿ (ಚಂಡಮಾರುತ)ಯ ಪೂರ್ವ ಸಿದ್ಧತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಈ ನಿರ್ದೇಶನ ನೀಡಿದರು. ಕರಾವಳಿಯಲ್ಲಿ ಆಳ ಮೀನುಗಾರಿಕೆ ಸೇರಿದಂತೆ ಮೀನುಗಾರಿಕೆ ಹಾಗೂ ಪ್ರವಾಸಿ ತಾಣಗಳಲ್ಲಿ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು, ಬೀಚ್‍ಗಳಲ್ಲಿ ಹೋಂ ಗಾರ್ಡ್ ಗಳನ್ನು ಯೋಜಿಸಬೇಕು, ಬಿಪೊರ್ ಜಾಯ್ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಅತ್ಯಂತ ಎಚ್ಚರ ವಹಿಸಬೇಕು, ಚಂಡಮಾರುತವು 60 ಕಿಲೋ ಮೀಟರ್‍ಗೂ ಹೆಚ್ಚಿನ ವೇಗದಲ್ಲಿ ಅಪ್ಪಳಿಸುತ್ತಿದೆ, ಕಡಲ ತೀರಗಳಲ್ಲಿ ಪ್ರವಾಸಕ್ಕೆ ಅವಕಾಶ ನೀಡಬಾರದು, ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ತಂಡಕ್ಕೆ ಅಗತ್ಯವಿರುವ ವಸತಿ, ಸಾರಿಗೆ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದೆ, ಗಾಳಿ, ಮಿಂಚು, ಗುಡುಗು ಇತ್ಯಾದಿಗಳಿಂದ ಯಾವುದೇ ರೀತಿಯ ಹಾನಿಯಾದ ಸಂದರ್ಭದಲ್ಲಿ ಕೂಡಲೇ ಸಂಬಂಧಿಸಿದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವರು, ಮುಖ್ಯವಾಗಿ ಸಾರ್ವಜನಿಕರಿಗೆ ಹವಾಮಾನದ ಮಾಹಿತಿಗಳನ್ನು ಸಕಾಲದಲ್ಲಿ ನೀಡಲಾಗುತ್ತಿದೆ, ಅರಣ್ಯ, ಅಗ್ನಿಶಾಮಕದಳ, ಮೆಸ್ಕಾಂ ಸೇರಿದಂತೆ ಅಗತ್ಯ ಇಲಾಖೆಗಳಲ್ಲಿ ಸಿಬ್ಬಂದಿಗಳು ಯಾವುದೇ ಸ್ಥಿತಿಯನ್ನು ಎದುರಿಸಲು ಸನ್ನದಗೊಂಡಿವೆ, ಎಸ್‍ಡಿಆರ್‍ಎಫ್ ನ 100 ಸಿಬ್ಬಂದಿಗಳ ತಂಡ ಸಿದ್ದವಿದ್ದು, ತಾಲೀಮು ನಡೆಸುತ್ತಿದೆ, ಎನ್‍ಡಿಆರ್‍ಎಫ್ ಜಿಲ್ಲೆಗೆ ಆಗಮಿಸುತ್ತಿದ್ದು, ವಸತಿ, ಸಾರಿಗೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಒದಗಿಸಿಕೊಡಲಾಗುವುದು, ಹಾಗೂ ಎರಡೂ ತಂಡಗಳೊಂದಿಗೆ ಸಭೆಯನ್ನು ನೆಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಹಿಂದಿನ ಅನುಭವದ ಆಧಾರದಂತೆ ಈ ಹಿಂದೆ ಭಾದಿತ ಪ್ರದೇಶಗಳಲ್ಲಿ ತಂಡ ತೆರಳಿ ಅಲ್ಲಿ ರಕ್ಷಿಸಲು ಕ್ರಮ ಕೈಗೊಳ್ಳಲಿದೆ ಮುಖ್ಯವಾಗಿ ಅಲ್ಲಿ ಸ್ಥಳೀಯರನ್ನೊಳಗೊಂಡ ಯುವ ಪಡೆಯನ್ನು ಸಿದ್ಧಗೊಳಿಸಲಾಗಿದೆ, ಅವರ ಪಟ್ಟಿ ಸಿದ್ದಪಡಿಸಿದ್ದು, ಅವರ ಮೊಬೈಲ್ ನಂಬರ್ ಪಡೆಯಲಾಗಿದೆ, ಈಗಾಗಲೇ ಅವರೊಂದಿಗೆ ಸಭೆಯನ್ನು ನಡೆಸಲಾಗಿದೆ ಮಳೆಗಾಲದ ಸಂದರ್ಭದಲ್ಲಿ ಮನೆಗಳಿಗೆ ಹಾವು ನುಗ್ಗುವ ಕಾರಣ ಹಾವುಗಳನ್ನು ಹಿಡಿಯುವವರ ಮೊಬೈಲ್ ನಂಬರ್‍ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ, ಜಿಲ್ಲೆಯಲ್ಲಿ 92 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಹಾಸ್ಟೆಲ್, ಶಾಲೆ, ಸಮುದಾಯ ಭವನಗಳಾಗಿರುವ ಕಾರಣ ಅಲ್ಲಿ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕರಾವಳಿ ಕವಲು ಪಡೆ, ಇಂಡಿಯನ್ ಕೋಸ್ಟ್‍ಗಾರ್ಡ್, ಲೋಕೋಪಯೋಗಿ ಇಲಾಖೆ, ಎಂಜಿನಿಯರಿಂಗ್ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳು ಸನ್ನದ್ದವಾಗಿರುವಂತೆ ರಶ್ಮಿ ಮಹೇಶ್ ಅವರು ಸೂಚನೆ ನೀಡಿದರು.

Advertisement

ಪ್ರವಾಸಿಗರು, ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಎಚ್ಚರಿಕೆವಹಿಸುವುದು. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಟೋಲ್ ಫ್ರೀ ಸಂಖ್ಯೆ 24/7 ಕಂಟ್ರೋಲ್ ರೂಮ್- 1077/0824-2442590 ಸಂಪರ್ಕಿಸುವುದು.

ತುರ್ತು ಸೇವೆಗೆ ನಿಯಂತ್ರಣ ಕೊಠಡಿಗಳ ವಿವರ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ-1077 (0824- 2442590) 24/7 ಕಾರ್ಯಾಚರಣೆಯಲ್ಲಿರುತ್ತದೆ.

ವಿಪತ್ತು ನಿರ್ವಹಣೆ ಕುರಿತಾಗಿ ನಿರ್ದೇಶನಗಳನ್ನು ನೀಡಲು, ತುರ್ತಾಗಿ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಸಂಬಂಧಿಸಿದವರಿಗೆ ವಿನಿಮಯ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ, ಉಪ ವಿಭಾಗ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ರಚಿಸಲಾಗಿದೆ.

ಜಿಲ್ಲೆಯ ಎಲ್ಲಾ ಉಪ-ವಿಭಾಗಾಧಿಕಾರಿಗಳ ಹಾಗೂ ಎಲ್ಲಾ ತಹಶೀಲ್ದಾರರ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಮ್ ಗಳನ್ನು ತೆರೆದು 24/7 ಕಾಲ ಕಾಯನಿರ್ವಹಿಸುವ ಮೂಲಕ ಪ್ರತಿ ದಿನ ಮಳೆ ಮತ್ತು ಮಳೆಹಾನಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ.

ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿ ಸಂಖ್ಯೆಗಳು
ಮಂಗಳೂರು-0824-2220587/596, ಉಳ್ಳಾಲ-0824-2204424, ಬಂಟ್ವಾಳ- 08255-232120/232500, ಪುತ್ತೂರು- 08251-230349/232799, ಬೆಳ್ತಂಗಡಿ-08256-232047/233123, ಸುಳ್ಯ- 08257-231231/230330/298330, ಮೂಡಬಿದ್ರೆ- 08258-238100/239900, ಕಡಬ-08251-260435, ಮುಲ್ಕಿ- 0824-2294496 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ವೈ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next