ಹೊಸದಿಲ್ಲಿ: ಅರಬೀ ಸಮುದ್ರದಲ್ಲಿ ಎದ್ದಿರುವ “ಕ್ಯಾರ್’ ಚಂಡಮಾರುತದ ತೀವ್ರತೆ ಹೆಚ್ಚುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಕೆಲವು ಭಾಗಗಳಲ್ಲಿ ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಗುಜರಾತ್ ಕರಾವಳಿಯುದ್ದಕ್ಕೂ ರವಿವಾರ ಮಧ್ಯಾಹ್ನದವರೆಗೂ ಸಮುದ್ರ ಭೋರ್ಗರೆಯಲಿದೆ. ಹೀಗಾಗಿ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ಗುಜರಾತ್‌ನಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಿರುವುದು ಉತ್ತಮ ಎಂದೂ ಇಲಾಖೆ ಸಲಹೆ ನೀಡಿದೆ.
ಶನಿವಾರ ಬೆಳಗ್ಗೆ 11.30ರ ವೇಳೆಗೆ ಕ್ಯಾರ್ ಚಂಡಮಾರುತವು ಮಹಾರಾಷ್ಟ್ರದ ರತ್ನಗಿರಿಯಿಂದ ಪಶ್ಚಿಮ-ನೈರುತ್ಯದ 350 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು. ರವಿವಾರ ಇದು ಗಂಭೀರ ಪ್ರಮಾಣದ ಚಂಡಮಾರುತವಾಗಿ ಮಾರ್ಪಾ ಡಾಗಲಿದ್ದು, ಮುಂದಿನ 5 ದಿನಗಳಲ್ಲಿ ಅದು ಒಮನ್ ಕರಾವಳಿಯತ್ತ ಸಾಗಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.
ಗೋವಾದಲ್ಲಿ ಇಳಿಮುಖ: ಚಂಡಮಾರುತವು ಪಶ್ಚಿಮ ಕರಾವಳಿಯಿಂದ ದೂರ ಸಾಗುತ್ತಿರುವ ಕಾರಣ, ಶನಿವಾರ ಸಂಜೆಯಿಂದಲೇ ಗೋವಾದಲ್ಲಿ ಮಳೆ ಇಳಿಮುಖವಾಗಲಿದೆ ಎಂದೂ ವರದಿ ತಿಳಿಸಿದೆ. ಶುಕ್ರವಾರ ಗೋವಾದಲ್ಲಿ ಭಾರೀ ಮಳೆಯಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ಅಪಾರ ಹಾನಿ: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಸುರಿದ ಮಳೆ ಅಪಾರ ಹಾನಿ ಉಂಟುಮಾಡಿದೆ. ಭಾರೀ ಪ್ರಮಾಣದ ಬೆಳೆ ಹಾನಿಯಾಗಿದ್ದು, ತಗ್ಗುಪ್ರದೇಶಗಳು ಜಲಾವೃತವಾಗಿವೆ, ಅನೇಕ ಗ್ರಾಮಗಳ ನಡುವೆ ಸಂಪರ್ಕವೇ ಕಡಿತಗೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಮಳೆ ಮುಂದುವರಿಕೆ
ಕ್ಯಾರ್ ಚಂಡಮಾರುತದ ಎಫೆಕ್ಟ್ ಎಂಬಂತೆ ರವಿವಾರವೂ ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.