Advertisement
ಅಂಫಾನ್ ಈಗಾಗಲೇ ರಣಭೀಕರ ಸ್ವರೂಪ ಪಡೆದುಕೊಂಡಿದ್ದು, ಬುಧವಾರ ಪಶ್ಚಿಮ ಬಂಗಾಲದ ಕರಾವಳಿಗೆ ಅಪ್ಪಳಿಸಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
Related Articles
Advertisement
ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅಂಫಾನ್ ವೇಗ ತಾಸಿಗೆ 155-166 ಕಿ.ಮೀ. ಇದ್ದು, ಕ್ರಮೇಣ 185 ಕಿ.ಮೀ. ಗಳಿಗೆ ಹೆಚ್ಚಲಿದೆ. 10 ರಿಂದ 15 ಸೆಂ.ಮೀಗಳಷ್ಟು ಮಳೆ ಸುರಿಯುವುದಲ್ಲದೇ, ಹಲವೆಡೆ ಭೂಕುಸಿತ ಆಗಬಹುದು. 2019ರಲ್ಲಿ ಪ.ಬಂಗಾಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ‘ಬುಲ್‌ಬುಲ್’ ಚಂಡಮಾರುತಕ್ಕಿಂತ ಅಂಫಾನ್ ಭೀಕರವಾಗಿರಲಿದೆ ಎಂದು ಐಎಂಡಿ ಹೇಳಿದೆ. ಹೀಗಾಗಿ ಕರಾವಳಿ ಪ್ರದೇಶದ ಜನರನ್ನು ಮಂಗಳವಾರ ಸಂಜೆಯ ಹೊತ್ತಿಗೆ ಸ್ಥಳಾಂತರಿಸಲಾಗಿದ್ದು, ಎಲ್ಲರಿಗೂ ಮಾಸ್ಕ್ ವಿತರಿಸಲಾಗಿದೆ.
ಆಹಾರ, ಔಷಧ, ನೀರು ಮತ್ತಿತರ ವಸ್ತುಗಳ ದಾಸ್ತಾನು ಕೈಗೊಳ್ಳಲಾಗುತ್ತಿದೆ. ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜತೆಗೆ ದೂರವಾಣಿ ಮಾತುಕತೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ.
ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಒಟ್ಟು ಸುಮಾರು 12 ಲಕ್ಷ ಮಂದಿಯನ್ನು ಸ್ಥಳಾಂತರಿಸಿ ಶಾಲಾ-ಕಾಲೇಜುಗಳಲ್ಲಿ ಆಶ್ರಯ ನೀಡಲಾಗಿದೆ. ಆದರೆ ಇಷ್ಟು ಮಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
12 ಲಕ್ಷ ಜನರ ಸ್ಥಳಾಂತರಒಡಿಶಾದಲ್ಲೂ ಅಂಫಾನ್ ಭೀಕರ ಪರಿಣಾಮ ಉಂಟುಮಾಡುವ ನಿರೀಕ್ಷೆಯಿದೆ. ಜಗಸ್ತಿಪುರ, ಕೇಂದ್ರಪಾರಾ, ಭದ್ರಕ್, ಜಾಜ್‌ಪುರ ಮತ್ತು ಬಾಲಾಸೋರ್‌ಗಳಲ್ಲಿ ಇದು ಸಾಕಷ್ಟು ಹಾನಿ ಮಾಡಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹಾಗಾಗಿ ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಒಡಿಶಾ ಮತ್ತು ಪ. ಬಂಗಾಲ ಕರಾವಳಿಯಿಂದ 12 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಆಯೋಗದ (ಎಸ್‌ಆರ್‌ಸಿ) ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ನ 14 ಮತ್ತು ಒಡಿಶಾ ವಿಪತ್ತು ನಿರ್ವಹಣ ಪಡೆಯ (ಒಡಿಆರ್‌ಎಎಫ್) 20 ತಂಡಗಳು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ಒಡಿಶಾ ಸರಕಾರ ತಿಳಿಸಿದೆ. ಮೀನುಗಾರರಿಗೆ ಮೇ 21ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.