ಮಹಾನಗರ: ನಗರದಲ್ಲಿ ಸೈಕ್ಲಿಸ್ಟ್‌ಗಳು ಮತ್ತು ಪಾದಚಾರಿಗಳ ಸುರಕ್ಷತೆಯೇ ಅತಿ ಸವಾಲಿನದ್ದು, ಈ ಕುರಿತು ಮಂಗಳೂರು ಬೈಸಿಕಲ್ ಕ್ಲಬ್‌ನಂತಹ ಸಂಘಟನೆಗಳು ಗಮನ ಹರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.
ಸಹೋದಯ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಮಂಗಳೂರು ಬೈಸಿಕಲ್ ಕ್ಲಬ್(ಎಂಬಿಸಿ)ನ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಲೆಗಾರರಿಗೂ ಉದ್ದೇಶ ಇರುತ್ತದೆ. ಆದರೆ ಹೆದ್ದಾರಿ, ನಗರ ರಸ್ತೆಗಳಲ್ಲಿ ಅತಿ ವೇಗ, ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಚಾಲಕರು ಯಾವುದೇ ಕಾರಣವಿಲ್ಲದೆ ಸೈಕಲ್ ಸವಾರರು, ಪಾದಚಾರಿಗಳನ್ನು ಕೊಲ್ಲುವಂತಾಗಿದೆ, ಸುರಕ್ಷಿತ ವಾಹನ ಚಾಲನೆ ಕುರಿತು ನಗರದಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ ಎಂದರು.
ಸೈಕಲ್ ಹಸ್ತಾಂತರ
ಮಂಗಳೂರಿನ ದಶಕದ ಹಿಂದಿನ ಹಿರಿಯ ಸೈಕಲ್ ರೇಸಿಂಗ್ ಪಟು, ನಾಬರ್ಟ್ ಡಿ’ಸೋಜಾ ಅವರ ಟ್ರೆಕ್ 1.5 ರೋಡ್ ಬೈಸಿಕಲ್‌ನ್ನು ಬಾಗಲಕೋಟ ಜಿಲ್ಲೆ ಜಮಖಂಡಿಯ ಉದಯೋನ್ಮುಖ ಸೈಕ್ಲಿಂಗ್ ಪಟು, 15ರ ಹರೆಯದ ಉದಯ ಗುಳೇದ್ ಅವರಿಗೆ ದಾನವಾಗಿ ಹಸ್ತಾಂತರಿಸಿದರು.
ನಾಬರ್ಟ್ ಡಿ’ಸೋಜಾ ತಮ್ಮಲ್ಲಿರುವ ಇನ್ನೊಂದು ಕಾರ್ಬನ್ ರೋಡ್ ಬೈಕ್ ಟ್ರೆಕ್ ಮಡೋನ್‌ನ್ನು ಮುಂಬರುವ ರಾóಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ವಿಜೇತರಿಗೆ ನೀಡುವ ಇರಾದೆ ಹೊಂದಿದ್ದಾರೆ. ಎಂಬಿಸಿಯಿಂದ ಗೋವಾದ ಅಲ್ಟ್ರಾ ಸೈಕಲ್ ರೇಸ್‌ನಲ್ಲಿ ಮೊದಲ ಸ್ಥಾನಿಗಳಾಗಿದ್ದ ಹರಿಪ್ರಸಾದ್, ಶ್ರೀಕಾಂತರಾಜ್, ಮಸೂದ್ ಟೀಕೆ ತಮ್ಮ ಅನುಭವ ಹಂಚಿಕೊಂಡರು. ಅದೇ ರೀತಿ ಎಂಬಿಸಿ ಸದಸ್ಯರಾಗಿ ತಮ್ಮ ಅನುಭವಗಳನ್ನು ಡಾ| ಸುನೀತಾ ಮೆಂಡಿಸ್, ಮಧುರಾ ಜೈನ್, ಗುರುರಾಜ್ ಪಾಟೀಲ್ ಪ್ರಸ್ತುತಪಡಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎಂಬಿಸಿ ಅಧ್ಯಕ್ಷ ದಿಜರಾಜ್ ನಾಯರ್ ಸ್ವಾಗತಿಸಿ, ಕೇವಲ ನಾಲ್ಕು ಸದಸ್ಯರಿಂದ 2011ರಲ್ಲಿ ಶುರುವಾದ ಕ್ಲಬ್ ಸದ್ಯ 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನೊಳಗೊಂಡಿದೆ ಎಂದರು. ಉಪಾಧ್ಯಕ್ಷ ಶ್ರೀಕಾಂತರಾಜ, ಖಜಾಂಚಿ ಹರಿಪ್ರಸಾದ್ ಶೇಖರೆ ಜಮಖಂಡಿ ಸೈಕ್ಲಿಂಗ್ ಕೋಚ್ ವಿಟuಲ ಭೋರ್ಜಿ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ಪ್ರಾಸ್ತಾವಿಸಿದರು. ಜತೆ ಕಾರ್ಯದರ್ಶಿ ಮಧುಕರ್ ನಿರೂಪಿಸಿ, ಸದಸ್ಯ ಜವಿರ್ ಮನ್ನಿಪ್ಪಾಡಿ ವಂದಿಸಿದರು.