Advertisement

ಶಾಲಾಂತ್ಯದಲ್ಲಿ ಮಕ್ಕಳಿಗೆ ಸೈಕಲ್‌ ಸೌಭಾಗ್ಯ!

12:30 AM Jan 18, 2019 | |

ಪುಂಜಾಲಕಟ್ಟೆ/ಉಡುಪಿ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನಲ್ಲಿ ವಿತರಣೆ ಮಾಡಲು ಬಾಕಿ ಇದ್ದು ತಡೆಹಿಡಿಯಲಾಗಿರುವ ಸೈಕಲ್‌ಗ‌ಳನ್ನು ಕೂಡಲೇ ವಿತರಣೆ ಮಾಡಲು ಆದೇಶಿಸಲಾಗಿದೆ. 

Advertisement

ಈಗಾಗಲೇ ವಿತರಣೆ ಮಾಡಿರುವ ಸೈಕಲ್‌ಗ‌ಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಪನಿರ್ದೇಶಕರು ಆನ್‌ಲೈನ್‌ ರ್‍ಯಾಂಡಮ್‌ ಪರಿಶೀಲನ ನಮೂನೆಯಲ್ಲಿ ಭರ್ತಿ ಮಾಡಿರುವ ಅಂಶಗಳ ಬಗ್ಗೆ ಸರಬರಾಜು ಸಂಸ್ಥೆಯವರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಉಚಿತ ಸೈಕಲ್‌ ವಿತರಣೆ ತಡೆಹಿಡಿಯಲು ಈ ಹಿಂದೆ ಸೂಚಿಸಲಾಗಿತ್ತು. ಆದರೆ ಈಗ 2018-19ನೇ ಸಾಲಿನಲ್ಲಿ ಸರಕಾರಿ, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸಲು; ಆದರೆ ಅದಕ್ಕೂ ಮುನ್ನ ಅವು ಬಳಸಲು ಯೋಗ್ಯವಾಗಿದೆಯೇ ಎಂದು ಖಾತ್ರಿಪಡಿಸಲು ಮತ್ತು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಿದೆ.

ಪ್ರಸ್ತುತ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮುಗಿಯುತ್ತಾ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದ್ದ ಸೈಕಲ್‌ ಯೋಜನೆ ಬಳಿಕ ಸಿದ್ದರಾಮಯ್ಯ ಸರಕಾರವಿದ್ದಾಗಲೂ ಮುಂದುವರಿದಿತ್ತು. ಈ ವರ್ಷ ಸೈಕಲ್‌ ವಿತರಣೆಗೆ ಸರಕಾರ ಸಜ್ಜಾಗಿತ್ತು. ಆದರೆ ಇದರ ಗುಣಮಟ್ಟದ ಕುರಿತು ತಕರಾರು ಎದ್ದ ಕಾರಣ ಕೆಲವೆಡೆಯಷ್ಟೇ ವಿತರಣೆಯಾಯಿತು. ಬಳಿಕ ಸಿಎಂ ಕುಮಾರಸ್ವಾಮಿ ಗುಣಮಟ್ಟದ ಸೈಕಲ್‌ ಒದಗಿಸುವ ವರೆಗೆ ವಿತರಣೆ ತಡೆಹಿಡಿದಿದ್ದು, ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ಈವರೆಗೂ ದೊರಕಿಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸೈಕಲ್‌ಗ‌ಳು ದೋಷಪೂರಿತ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೇ ವಿತರಿಸಬೇಕೆಂದು ಸರಕಾರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ಬಂಟ್ವಾಳ ತಾಲೂಕಿನ ಸೈಕಲ್‌ ವಿತರಣೆ ತಡೆಹಿಡಿಯಲಾಗಿತ್ತು. ಬಳಿಕ ಸರಕಾರದ ಆದೇಶದಂತೆ ಇಲಾಖೆ ಕಲ್ಲಡ್ಕ ಹಾಗೂ ಮುಡಿಪು ಶಾಲೆಗೆ ತೆರಳಿ ಸೈಕಲ್‌ಗ‌ಳ ಗುಣಮಟ್ಟ ಪರಿಶೀಲಿಸಿ ವರದಿ ನೀಡಿತ್ತು. ಉಡುಪಿ ಜಿಲ್ಲೆಯ ಕೆಲವು ಶಾಲೆಗಳಿಗೆ ಸೈಕಲ್‌ ಪೂರೈಕೆ ಆಗಿದ್ದು, ಇದರ ವಿತರಣೆ ತಡೆ ಹಿಡಿಯಲಾಗಿತ್ತು. ಈಗ ಅಂತಹ ಶಾಲೆಗಳಿಗೆ ವಿತರಿಸಲು ಸೂಚನೆ ನೀಡಲಾಗಿದೆ. ಇನ್ನು ಕೆಲವು ಶಾಲೆಗಳಿಗೆ ಸೈಕಲ್‌ ವಿತರಣೆಯಾಗಬೇಕಾಗಿದೆ.

Advertisement

ವಿತರಣೆ ಮಾಡುವ ಸಂದರ್ಭ, ಸಂಬಂಧಿಸಿದ ವಿಭಾಗೀಯ ಹಂತದ ಮತ್ತು ಜಿಲ್ಲಾ ಹಂತದ ಪರಿಶೀಲನ ತಂಡವು ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿ ರಾಜ್ಯ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಸರಬರಾಜಿಗೆ ಬಾಕಿ ಇರುವ ಸೈಕಲ್‌ಗ‌ಳನ್ನು ವಿತರಣೆ ಮಾಡುವ ಪೂರ್ವದಲ್ಲಿ ಪ್ರತಿ ಶಾಲಾ ಹಂತದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಸ್ಥಳೀಯ ಸರಕಾರಿ ನೌಕರರನ್ನು ಒಳಗೊಂಡ ತ್ರಿಸದಸ್ಯರ ಸಮಿತಿಯನ್ನು ರಚಿಸಿ, ಪರಿಶೀಲಿಸಿ, ಅದನ್ನು ನಮೂದಿಸಿ, ದೃಢೀಕರಿಸಿಕೊಳ್ಳಬೇಕು ಎಂದು ಸೂಚಿಸುವ ಮೂಲಕ ಗುಣಮಟ್ಟ ಪರಿಶೀಲನೆಯ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಇಲಾಖೆಗೆ ಹೊರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next