ಹುಬ್ಬಳ್ಳಿ: ತೈಲ ಸೇರಿದಂತೆ ವಿವಿಧ ಪದಾರ್ಥಗಳ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ನಿಂದ ಜು. 7ರಂದು ರಾಜ್ಯಾದ್ಯಂತ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಜು.31ರವರೆಗೆ ಕೋವಿಡ್‌ನಿಂದ ಮೃತಪಟ್ಟವರು, ಪರಿಹಾರ ಸಿಗದಿರುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು ಎಂದು ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹು- ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಸಹಾಯಹಸ್ತ ಕಾರ್ಯಕ್ರಮ ಹಾಗೂ ಬೆಲೆ ಏರಿಕೆ ವಿರುದ್ಧದ ಸೈಕಲ್ ಜಾಥಾ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರಕ್ಕೆ ಮುಂದಾಲೋಚನೆ ಇಲ್ಲದ್ದರಿಂದ ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರಕಾರ ಆರೋಗ್ಯ ಇಲಾಖೆಯಲ್ಲಿ ಮೂಲಸೌಕರ್ಯ ಹೆಚ್ಚಿಸಿಲ್ಲ. ಬೆಡ್, ಮಾಸ್ಕ್, ಆಕ್ಸಿಜನ್ ಕಾನ್ಸಂಟ್ರೇಟರ್, ಔಷಧಿ ಇಲ್ಲದ ಪರಿಸ್ಥಿತಿ ಇದೆ. ಬಹಳಷ್ಟು ಗಣ್ಯರು, ಮುಖಂಡರು, ಜನಸಾಮಾನ್ಯರು ನಮ್ಮನ್ನೆಲ್ಲ ಅಗಲಿದ್ದಾರೆ. ಇದರಿಂದ ಜನ ಭಯಭೀತರಾಗಿದ್ದಾರೆ. ಸರಕಾರ ಸರಿಯಾಗಿ ಮುಂದಾಲೋಚನೆ ಮಾಡಿ ಕ್ರಮ ಕೈಗೊಂಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ದೂರಿದರು.
ಕೋವಿಡ್‌ನಿಂದ ಮೃತಪಟ್ಟವರ ಹಾಗೂ ತೊಂದರೆಗೊಳಗಾದವರ ಬಗ್ಗೆ ಸ್ಪಷ್ಟ ಮಾಹಿತಿ, ಅಂಕಿ-ಸಂಖ್ಯೆ ಇಲ್ಲ. ಕೋವಿಡ್ ಸಾವು ಮರಣ ಪ್ರಮಾಣಪತ್ರದಲ್ಲಿ ಇರುವುದಿಲ್ಲ. ಆದರೆ ಪಾಸಿಟಿವ್ ಎಂದು ಕೊಡುತ್ತಿದ್ದಾರೆ. ಇದರಿಂದ ಗೊಂದಲವುಂಟಾಗುತ್ತಿದೆ. ಪಕ್ಷದ ಒತ್ತಾಯದ ಮೇರೆ ಕೋವಿಡ್‌ನಿಂದ ಮೃತಪಟ್ಟವರಿಗೆ 1ಲಕ್ಷ ರೂ. ಪರಿಹಾರ ಕೊಟ್ಟರು. ಅದು ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ. ಇನ್ನುಳಿದವರ ಬಗ್ಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಹೀಗಾಗಿ ಪಕ್ಷವು ಎಐಸಿಸಿ ಕರೆಯ ಮೇರೆಗೆ ಜನರ ಬಳಿ ತೆರಳಿ ಅವರ ಕಷ್ಟ-ನಷ್ಟ, ನೋವು ಆಲಿಸಲಿದೆ. ನಿಜ ಸಂಗತಿ ತಿಳಿಯಲಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಜು.30ಕ್ಕೆ ಸಹಾಯಹಸ್ತ ಕಾರ್ಯಕ್ರಮ ಮುಗಿಸಬೇಕು. ಈ ಎಲ್ಲ ಮಾಹಿತಿ ತೆಗೆದುಕೊಂಡು ಭಾರತ ಸರಕಾರದ ಮೇಲೆ ಒತ್ತಡ ತರಲಾಗುವುದು. ನಿಜಾಂಶ ತಿಳಿಸಲಾಗುತ್ತದೆ ಎಂದರು.
ಕೋವಿಡ್‌ಗಿಂತಲೂ ಮುಂಚೆಯೆ ದೇಶದ ಅರ್ಥಿಕ ಪ್ರಗತಿ ಕುಂಠಿತಗೊಂಡಿದೆ. ಜಿಡಿಪಿ ಕುಸಿದಿದೆ. ನಿರುದ್ಯೋಗ ತಾಂಡವಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಕಡೆ ಕೊಟ್ಟು, ಇನ್ನೊಂದೆಡೆ ಕಸಿದುಕೊಳ್ಳುತ್ತಿವೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಆಹಾರಧಾನ್ಯ ಸೇರಿದಂತೆ ಎಲ್ಲ ದರ ಏರಿಕೆಯಾಗಿವೆ. ಬೆಲೆ ಏರಿಕೆ ಖಂಡಿಸಿ ಜು. 7ರಂದು ಬೆಳಗ್ಗೆ 11:00 ಗಂಟೆಗೆ ಸೈಕಲ್ ಜಾಥಾ ನಡೆಸಲಾಗುವುದು ಎಂದರು. ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡರಾದ ಎ.ಎಂ. ಹಿಂಡಸಗೇರಿ, ಪ್ರೊ. ಐ.ಜಿ. ಸನದಿ, ಎಫ್.ಎಚ್. ಜಕ್ಕಪ್ಪನವರ, ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಅನ್ವರ ಮುಧೋಳ, ಇಸ್ಮಾಯಿಲ್ ತಮಟಗಾರ ಮೊದಲಾದವರಿದ್ದರು.