Advertisement

ಜೀರೋದಿಂದ ಹೀರೋ ಆದ ಕನ್ನಡಿಗ! ಮೈಸೂರು cycle ಬ್ರ್ಯಾಂಡ್ ಆರಂಭವಾದದ್ದು ಹೇಗೆ ಗೊತ್ತಾ?

09:01 AM May 17, 2019 | Nagendra Trasi |

ಒಂದು ಕಾಲದಲ್ಲಿ ಮನೆಮಾತಾಗಿದ್ದ ಮೈಸೂರು ಮೂಲದ ಸಂಸ್ಥೆ ಇದು. ಇಂದು ಜಾಗತಿಕ ಮಟ್ಟದಲ್ಲಿಯೂ ಹೆಸರು ಗಳಿಸಿದೆ.  1948ರಲ್ಲಿ ಕೇವಲ ಒಂದು ಸಾವಿರ ರೂಪಾಯಿ ಬಂಡವಾಳದಲ್ಲಿ ಎನ್.ರಂಗರಾವ್ ಅಂಡ್ ಸನ್ಸ್ ಹೆಸರಿನಲ್ಲಿ ಉದ್ಯಮವನ್ನು ಆರಂಭಿಸಿದ್ದ ಅವರು ಅತ್ಯಲ್ಪ ಅವಧಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಕೀರ್ತಿ ರಂಗರಾವ್ ಅವರದ್ದು. ಹೌದು ಇದು ಮೈಸೂರಿನಲ್ಲಿ ಆರಂಭಗೊಂಡು ಬಳಿಕ ವಿದೇಶಗಳಲ್ಲಿಯೂ ಪರಿಮಳದ ಸುವಾಸನೆ ಬೀರಿದ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಕಂಪನಿಯ ಯಶೋಗಾಥೆ!

Advertisement

ದೇಶಾದ್ಯಂತ 3 ಸಾವಿರಕ್ಕೂ ಅಧಿಕ ಸೇಲ್ಸ್ ಮೆನ್ ಗಳು, 5 ಸಾವಿರಕ್ಕೂ ಅಧಿಕ ಡಿಸ್ಟ್ರಿಬ್ಯೂಟರ್ಸ್ ಗಳು ಕಾರ್ಯನಿರ್ವಹಿಸುತ್ತಿರುವ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಏಷ್ಯಾ, ಆಫ್ರಿಕಾ, ಯುರೋಪ್, ಲ್ಯಾಟಿನ್ ಅಮೆರಿಕ, ಮಧ್ಯ ಏಷ್ಯಾ, ಉತ್ತರ ಅಮೆರಿಕ ಸೇರಿದಂತೆ 65ಕ್ಕೂ ಅಧಿಕ ವಿದೇಶಗಳಿಗೆ ರಫ್ತಾಗುತ್ತಿದೆ. ಈ ಮೂಲಕ ಪುಟ್ಟದಾಗಿ ಆರಂಭಗೊಂಡ ಅಗರಬತ್ತಿ ಕಾರ್ಖಾನೆ ದೇಶ, ವಿದೇಶಗಳಲ್ಲಿಯೂ ಅಗರಬತ್ತಿಯ ಮೂಲಕ ಪರಿಮಳ ಹರಡಿಸಿ ಖ್ಯಾತ ಪಡೆದ ಹೆಗ್ಗಳಿಕೆ ರಂಗರಾವ್ ಅವರದ್ದು.. ಇಂದು ವಾಸು ಸೈಕಲ್ ಬ್ರ್ಯಾಂಡ್ ಅಗರಬತ್ತಿ ಕಂಪನಿಯ ವಾರ್ಷಿಕ ವಹಿವಾಟು 2,500 ಕೋಟಿಗೂ ಅಧಿಕವಂತೆ!

“ರಾವ್” ಆ ಕಾಲದಲ್ಲೇ ಒಂದು ಕೊಂಡರೆ ಮತ್ತೊಂದು ಫ್ರೀ ಆಫರ್ ಕೊಟ್ಟ ಚಾಣಕ್ಯ ಬ್ಯುಸಿನೆಸ್ ಮೆನ್!

ಮೂಲತಃ ಕನ್ನಡಿಗರಾಗಿದ್ದ ಎನ್.ರಂಗರಾವ್ ಅವರ ತಂದೆ ತಮಿಳುನಾಡಿನ ಮಧುರೈನಲ್ಲಿದ್ದರು. ರಂಗರಾವ್ ತಂದೆ ನಾರಾಯಣ ಆಚಾರ್ಯ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ವಿಧಿ ವಿಪರ್ಯಾಸ ರಂಗರಾವ್ 6 ವರ್ಷದ ಪುಟ್ಟ ಬಾಲಕನಾಗಿದ್ದಾಗಲೇ ತಂದೆ ಇಹಲೋಕ ತ್ಯಜಿಸಿದ್ದರು. ಬಡತನದಲ್ಲಿಯೇ ಬದುಕು ಸಾಗಿಸುತ್ತಿದ್ದ ಆಚಾರ್ಯರ ಕುಟುಂಬ ಆರ್ಥಕವಾಗಿ ದುರ್ಬಲರಾಗಿದ್ದರು. ತಂದೆ ಹಣವನ್ನಾಗಲಿ, ಆಸ್ತಿಯನ್ನಾಗಲಿ ಯಾವುದನ್ನೂ ಮಾಡಿರಲಿಲ್ಲವಾಗಿತ್ತು. ಬಾಲ್ಯದಲ್ಲಿಯೇ ರಂಗರಾವ್ ಸ್ವಾಭಿಮಾನಿಯಾಗಿದ್ದರು..ಯಾರ ಮುಂದೆಯೂ ನೆರವಿಗಾಗಿ ಕೈಚಾಚಿಲ್ಲ! ತಮಿಳುನಾಡಿನ ಪೆರಿಯಾಕುಳಂನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ರಂಗರಾವ್ ನಂತರ ಮದುರೈನನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದಿದ್ದರು.

Advertisement

ತಮ್ಮ 11ನೇ ವಯಸ್ಸಿನಲ್ಲಿಯೇ ವಿದ್ಯಾಭ್ಯಾಸದ ಫೀಸ್ ಕಟ್ಟಲು ಶಾಲೆಯ ಆವರಣದಲ್ಲಿ ರಾವ್ ಬಿಸ್ಕೆಟ್ ಮಾರಾಟ ಮಾಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಮತ್ತೊಬ್ಬ ಹುಡುಗ ಬಿಸ್ಕೆಟ್ ಮಾರಾಟ ಮಾಡುವ ಮೂಲಕ ಸ್ಪರ್ಧೆಯೊಡ್ಡಿ ಬಿಟ್ಟಿದ್ದ! ಆಗ ರಂಗರಾವ್ ಹೂಡಿದ್ದ ಉಪಾಯ ಏನು ಅಂದರೆ ಯಾರು ತನ್ನ ಬಳಿ ಬಿಸ್ಕೆಟ್ ಖರೀದಿಸುತ್ತಾರೋ ಅದರ ಜೊತೆ ಪೆಪ್ಪರ್ ಮೆಂಟ್(ಸಿಹಿತಿಂಡಿ) ಉಚಿತವಾಗಿ ಕೊಡುವುದಾಗಿ ಹೇಳಿಬಿಟ್ಟಿದ್ದರು. ಇದರಿಂದಾಗಿ ಬಿಸ್ಕೆಟ್ ಮಾರುತ್ತಿದ್ದ ಪ್ರತಿಸ್ಪರ್ಧಿ ಹುಡುಗನ ವ್ಯವಹಾರ ನಿಂತು ಹೋಗಿತ್ತಂತೆ!

ಕಾಲೇಜು ಶಿಕ್ಷಣಾಭ್ಯಾಸದ ಸಂದರ್ಭದಲ್ಲಿಯೂ ರಂಗರಾವ್ ಅವರು ತಮ್ಮ ಆದಾಯಕ್ಕಾಗಿ ಟ್ಯೂಷನ್ ಕೊಡುತ್ತಿದ್ದರಂತೆ. ಈ ವೇಳೆ ರಂಗರಾವ್ ಅವರಿಗೆ ಟೈಪಿಂಗ್ ಕಲಿಯಬೇಕೆಂಬುದು ದೊಡ್ಡ ಇಚ್ಛೆಯಾಗಿತ್ತು. ಆದರೆ ಫೀಸ್ ಕಟ್ಟಲು ಅವರ ಬಳಿ ಹಣವಿರಲಿಲ್ಲವಾಗಿತ್ತು. ಏತನ್ಮಧ್ಯೆ ಟೈಪಿಂಗ್ ತರಬೇತಿ ಕೇಂದ್ರದಲ್ಲಿ ಒ ವಿದ್ಯಾರ್ಥಿಗಳಿಗೆ ಟೈಪಿಂಗ್ ಹೇಳಿಕೊಡುತ್ತಿದ್ದ ವೇಳೆ ರಂಗರಾವ್ ಅವರು ಹೊರಗೆ ನಿಂತು ಕೇಳಿಸಿಕೊಳ್ಳುತ್ತಿದ್ದರಂತೆ. ಈ ಹುಡುಗನ ಆಸಕ್ತಿಯನ್ನು ಗಮನಿಸಿದ ಶಿಕ್ಷಕರೊಬ್ಬರು ಆಫರ್ ಒಂದನ್ನು ಕೊಟ್ಟಿದ್ದರು. ನೀನು ಇನ್ನೂ ನಾಲ್ಕೈದು ಮಂದಿ ಹುಡುಗರನ್ನು ಕರೆತಂದರೆ, ನಿನಗೂ ಹಾಗೂ ಆ ಹುಡುಗರಿಗೆ ಉಚಿತವಾಗಿ ಟೈಪಿಂಗ್ ಹೇಳಿಕೊಡುವುದಾಗಿ ಹೇಳಿದ್ದರು. ಅದರಂತೆ ಹುಡುಗರನ್ನು ಒಟ್ಟುಗೂಡಿಸಿ ರಾವ್ ಟೈಪಿಂಗ್ ಕಲಿತಿದ್ದರು!

1912ರಲ್ಲಿ ಜನಿಸಿದ್ದ ರಾವ್ ತಮ್ಮ 27ನೇ ವಯಸ್ಸಿಗೆ ಸೀತಾ ಎಂಬಾಕೆ ಜೊತೆ ಸಪ್ತಪದಿ ತುಳಿದಿದ್ದರು. ವಿವಾಹದ ನಂತರ ರಂಗರಾವ್ ಅವರು ಮಾವನ(ಹೆಂಡತಿಯ ತಂದೆ) ಊರಾದ ಅರಾವಾನ್ ಕಾಡು ಎಂಬಲ್ಲಿಗೆ ಬಂದು ನೆಲೆಸಿದ್ದರು. ಅಲ್ಲಿ 1939ರಲ್ಲಿ ಕೋ ಆಪರೇಟಿವ್ ಸ್ಟೋರ್ ಒಂದರಲ್ಲಿ  ಕ್ಲರ್ಕ್ ಆಗಿ ಕೆಲಸ ಮಾಡಲು ಆರಂಭಿಸಿದ್ದರು. 1944ರವರೆಗೆ ಕ್ಲರ್ಕ್ ಕೆಲಸ ಮಾಡುತ್ತಿದ್ದ ರಾವ್ ಗೆ ತಾನು ಸ್ವತಂತ್ರವಾಗಿ ಏನಾದರು ಮಾಡುವ ಮೂಲಕ ಯಶಸ್ಸು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಚಿಗುರೊಡೆಯತೊಡಗಿತ್ತು. 1942ರಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಪಡೆದಿದ್ದರು. ಆಗ ರಂಗರಾವ್ ದಂಪತಿಗೆ ಮೊದಲ ಮಗ ಗುರು ಜನಿಸಿದ್ದ ಸಂಭ್ರಮ.

ತದನಂತರ ರಂಗರಾವ್ ಕ್ಲರ್ಕ್ ಕೆಲಸ ಬಿಟ್ಟು ಹುಣಸೂರು ಕಾಫಿ ಕ್ಯೂರಿಂಗ್ ವರ್ಕ್ಸ್ ಕೋ ಆಪರೇಟಿವ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಕೊಡಗಿನ ಪೋಲಿಬೆಟ್ಟದಲ್ಲಿರುವ ಕನ್ ಸೋಲಿಡೇಟೆಡ್ ಕಾಫಿ ಎಸ್ಟೇಟ್ ನ ಕೋ ಆಪರೇಟಿವ್ ಸ್ಟೋರ್ ನ ಮ್ಯಾನೇಜರ್ ಹುದ್ದೆ ನಿರ್ವಹಿಸಲು ಹೇಳಿದ್ದರು. 1948ರವರೆಗೆ ರಂಗರಾವ್ ಅವರು ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.

ಸಾಂಸ್ಕೃತಿಕ ನಗರಿಗೆ ಎಂಟ್ರಿ…ಸೈಕಲ್ ಬ್ರ್ಯಾಂಡ್ ಅಗರಬತ್ತಿ ಆರಂಭವಾಗಿದ್ದು ಇಲ್ಲೇ!

ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ 1948ರಲ್ಲಿ ನೆರೆಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗರಾವ್ ಅವರು “ಮೈಸೂರು ಪ್ರಾಡಕ್ಟ್ಸ್ ಆ್ಯಂಡ್ ಜನರಲ್ ಟ್ರೇಡಿಂಗ್ ಕಂಪನಿ” ಶಾಪ್ ಅನ್ನು ಆರಂಭಿಸಿಬಿಟ್ಟಿದ್ದರು. ಇದೊಂದು ವಹಿವಾಟು ನಡೆಸುವ ಅಂಗಡಿಯಾಗಿತ್ತು. ಇಲ್ಲಿ ಕೂರ್ಗ್ ನಲ್ಲಿನ ಮೆಟಿರೀಯಲ್ ಅನ್ನು ಮೈಸೂರಿನಲ್ಲಿಯೂ, ಮೈಸೂರಿನಲ್ಲಿರುವ ವಸ್ತುಗಳನ್ನು ಕೂರ್ಗ್ ನಲ್ಲಿಯೂ ಮಾರಾಟ ಮಾಡುವ ವ್ಯವಸ್ಥೆಯಾಗಿತ್ತು. ಯಾಕೆಂದರೆ ಸ್ವಂತವಾಗಿ ವ್ಯವಹಾರ ಆರಂಭಿಸಲು ರಂಗರಾವ್ ಬಳಿ ಹಣಕಾಸಿನ ಬಲ ಇರಲಿಲ್ಲವಾಗಿತ್ತು.

ಇದರ ನಡುವೆಯೇ ರಂಗರಾವ್ ಅವರು ಸೋಪ್ ಪೌಡರ್(ಶಿಕಾಕಾಯಿ) ತಯಾರಿಸುವ ಶಾಖೆಯೊಂದನ್ನು ಆರಂಭಿಸಲು ಸಿದ್ದತೆ ನಡೆಸಿದ್ದರು. ಅದರಲ್ಲಿ ಶಿಕಾಕಾಯಿ ಹೇರ್ ಆಯಿಲ್, ಸ್ನೋ ಕ್ರೀಮ್ ಹಾಗೂ ಅಗರಬತ್ತಿ ಪ್ರಮುಖ ಉತ್ಪನ್ನಗಳಾಗಿದ್ದವು. ರಂಗರಾವ್ ಅವರಿಗೆ ಅಗರಬತ್ತಿ ಬಗ್ಗೆ ಹೆಚ್ಚಿಗೆ ಏನೂ ತಿಳಿದಿರಲಿಲ್ಲವಾಗಿತ್ತು! ಹೀಗೆ ಮೊದಲ ಬಾರಿಗೆ ಮೈಸೂರಿನಲ್ಲಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಪರಿಮಳವನ್ನು ಬೆರೆಸಿದ ಅಗರಬತ್ತಿಯನ್ನು ರಂಗರಾವ್ ಮಾರಾಟ ಮಾಡಲು ಆರಂಭಿಸಿಬಿಟ್ಟಿದ್ದರು.

ಸುಮಾರು ಒಂದೂವರೆ ವರ್ಷದ ನಂತರ ಅಗರಬತ್ತಿ ವ್ಯವಹಾರವೇ ಹೆಚ್ಚು ಕೈಹಿಡಿತೊಡಗಿತ್ತು. ಅಗರಬತ್ತಿಯ ಬಗ್ಗೆ ಖುದ್ದು ರಂಗರಾವ್ ಅವರೇ ಹೆಚ್ಚು ತಿಳಿದುಕೊಳ್ಳತೊಡಗಿದರು. ಜೊತೆಗೆ ಹೊಸ, ಹೊಸ ಪ್ರಯೋಗಗಳನ್ನು ಮಾಡತೊಡಗಿದರು. ಇದರಿಂದ ಅಗರಬತ್ತಿ ವ್ಯವಹಾರ ಹೆಚ್ಚು ಜನಪ್ರಿಯವಾಗತೊಡಗಿತ್ತು.

ರಂಗರಾವ್ ಅವರ ಹಿರಿಯ ಮಗ ಗುರು ಹಾಗೂ ಹಿರಿಯ ತಂಗಿ ಅಗರಬತ್ತಿ ಪ್ಯಾಕ್ ಮಾಡಲು ನೆರವು ನೀಡತೊಡಗಿದ್ದರು. 1949-50ರ ಹೊತ್ತಿಗೆ ರಂಗರಾವ್ ಅವರು ಅಗರಬತ್ತಿ ಮಾರಾಟ ಮಾಡಲು ಬೇರೆ, ಬೇರೆ ಊರಿಗೆ ಹೋಗಲು ಆರಂಭಿಸಿದ್ದರು. ಅದರಲ್ಲಿಯೂ ಮುಖ್ಯವಾಗಿ ರಂಗರಾವ್ ಅವರು ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಅಗರಬತ್ತಿಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಅಲ್ಲಿ ಮಾರಾಟ ಮಾಡುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ರಾವ್ ಆಗ ಮಾರುಕಟ್ಟೆ ಲೆಕ್ಕಚಾರ ಹಾಕಿ, ಅಗರಬತ್ತಿಯನ್ನು ಹಾಸನಕ್ಕೆ ಹೆಚ್ಚು ಒದಗಿಸತೊಡಗಿದ್ದರಂತೆ! ಯಾಕೆಂದರೆ ಚಿಕ್ಕಮಗಳೂರಿನ ಜನ ಹಾಸನಕ್ಕೆ ಬಂದು ಅಗರಬತ್ತಿಯನ್ನು ರಖಂ ಆಗಿ ಕೊಂಡೊಯ್ಯಲು ಆರಂಭಿಸಿದರೆ ಮಾರುಕಟ್ಟೆ ಮತ್ತಷ್ಟು ಹೆಚ್ಚಿಸಬಹುದು ಎಂಬುದು ಅವರ ಲೆಕ್ಕಚಾರವಾಗಿತ್ತು.

1948ರಲ್ಲಿ ಅಗರಬತ್ತಿ ವ್ಯವಹಾರ ಆರಂಭಿಸಲು ಶುರು ಮಾಡಿದಾಗ..ತಮ್ಮ ಬ್ರ್ಯಾಂಡ್ ವಿಸ್ತರಿಸಲು “ಸೈಕಲ್” ಚಿಹ್ನೆಯೇ ಹೆಚ್ಚು ಸೂಕ್ತವಾದದ್ದು ಎಂಬುದನ್ನು ಮನಗಂಡಿದ್ದ ರಂಗರಾವ್ ಅವರು ಸೈಕಲ್ ಫ್ಯೂರ್ ಅಗರಬತ್ತಿ ಎಂದೇ ಹೆಸರು ಇಟ್ಟು ಬಿಟ್ಟಿದ್ದರು. ಅಷ್ಟೇ ಅಲ್ಲ ಸೈಕಲ್ ಎಂಬ ಪದ ಭಾರತೀಯ ಎಲ್ಲಾ ಭಾಷೆಯಲ್ಲಿಯೂ ಸರಳವಾಗಿ ಅರ್ಥೈಸಿಕೊಳ್ಳಬಹುದು ಎಂಬುದು ರಂಗರಾವ್ ಅವರ ನಿಲುವು ಆಗಿತ್ತು.

ಸುಮಾರು 7 ದಶಕಗಳ ಕಾಲ ಉದ್ಯಮದಲ್ಲಿರುವ ಎನ್ ರಂಗ ರಾವ್ ಆ್ಯಂಡ್ ಸನ್ಸ್ ಕಂಪನಿಯು ಮುಖ್ಯವಾಗಿ ಸೈಕಲ್ ತ್ರೀ ಇನ್ ಒನ್, ಲಿಯಾ, ರಿದಂ, ವುಡ್ಸ್, ಎನ್ ಆರ್ ಆ್ಯಂಡ್ ಫ್ಲೂಟ್ ಪ್ರಮುಖ ಬ್ರ್ಯಾಂಡ್ ಗಳಾಗಿವೆ. ಇದೀಗ ಕಂಪನಿ ಗೃಹೋಪಯೋಗಿ ಸುಗಂಧ ದ್ರವ್ಯ ಉತ್ಪನ್ನಗಳು, ಮೇಣದಬತ್ತಿ, ಎಲೆಕ್ಟ್ರಾನಿಕ್ಸ್, ನೆಸ್ಸೋ, ಎನ್ ಆರ್ ಫೌಂಡೇಶನ್ ಹೀಗೆ ಅನೇಕ ವ್ಯವಹಾರಗಳು, ಚಾರಿಟೇಬಲ್ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಅರ್ಜುನ್ ರಂಗಾ

ರಂಗ ರಾವ್ ಅವರಿಗೆ ಏಳು ಗಂಡು, ಇಬ್ಬರು ಹೆಣ್ಣು ಮಕ್ಕಳು. ಗುರು, ಆರ್.ಎನ್. ಮೂರ್ತಿ, ವಾಸು, ಶ್ರೀಧರ್ . 1978ರಲ್ಲಿ ರಂಗರಾವ್ ಅವರು ಉದ್ಯಮದಿಂದ ನಿವೃತ್ತಿ ಹೊಂದಿದ್ದರು. 1980ರಲ್ಲಿ ವಿಧಿವಶರಾಗಿದ್ದರು. ಪ್ರಸ್ತುತ ಆರ್.ಎನ್ ಮೂರ್ತಿ ಅವರ ಪುತ್ರ ಅರ್ಜುನ್ ರಂಗಾ ಅವರು ಕಂಪನಿ ವ್ಯವಹಾರದ ಹೊಣೆ ಹೊತ್ತುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next