Advertisement

ಮಹಿಳಾ ಸಬಲೀಕರಣಕ್ಕಾಗಿ ಸೈಕಲ್‌ ಜಾಥಾ

05:31 PM Dec 08, 2018 | Team Udayavani |

ಚಿತ್ರದುರ್ಗ: ಕರ್ನಾಟಕ ಮಹಿಳಾ ಪೊಲೀಸ್‌ ಯಾತ್ರೆ ಮತ್ತು ಸ್ತ್ರೀ ಸಬಲೀಕರಣಕ್ಕಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಹಮ್ಮಿಕೊಳ್ಳಲಾಗಿದ್ದ ಸೈಕಲ್‌ ಜಾಥಾ ದಾವಣಗೆರೆ ಮಾರ್ಗವಾಗಿ ನಗರಕ್ಕೆ ಶುಕ್ರವಾರ ಸಂಜೆ ಆಗಮಿಸಿತು. ಸೈಕಲ್‌ ಜಾಥಾಕ್ಕೆ ಮಕ್ಕಳು ಗುಲಾಬಿ ಹೂ ನೀಡಿ ಅದ್ಧೂರಿ ಸ್ವಾಗತ ಕೋರಿದರು.

Advertisement

ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಡಿಜಿಪಿ ಭಾಸ್ಕರ್‌ ರಾವ್‌, ಮಹಿಳಾ ಸಬಲೀಕರಣಕ್ಕಾಗಿ ಈ ಹಿಂದೆ ಸರ್ಕಾರ ಸಾಕಷ್ಟು ಸುತ್ತೋಲೆ, ಆದೇಶ, ಅಧಿನಿಯಮ ಹೊರಡಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಗುರಿ ತಲುಪಲು ತಳಮಟ್ಟದಿಂದ ಅಧ್ಯಯನ ಮಾಡಲು ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಇಡೀ ಜಾಥಾದಲ್ಲಿ 99 ಮಹಿಳಾ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದು, ಪ್ರತಿ ನಿತ್ಯ 100-120 ಕಿ.ಮೀ. ದೂರ ಸೈಕಲ್‌ನಲ್ಲಿ ಪ್ರಯಾಣ ಮಾಡಲಾಗುತ್ತಿದೆ. ಮಾರ್ಗ ಮಧ್ಯದಲ್ಲಿ ಶಾಲೆಗಳು, ಅಂಗನವಾಡಿಗಳು, ರಸ್ತೆ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಭೇಟಿ ನೀಡಿ ಬೀದಿ ನಾಟಕ, ಸಾರ್ವಜನಿಕರೊಂದಿಗೆ ಸಂವಾದ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಮಹಿಳಾ ದೌರ್ಜನ್ಯ, ಅತ್ಯಾಚಾರ, ಕೊಲೆ, ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಇತರೆ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಕೊಲೆ, ದೌರ್ಜನ್ಯ, ಅತ್ಯಾಚಾರದಂತ ಪ್ರಕರಣಗಳನ್ನು ಹೇಗೆ ತಡೆಗಟ್ಟಬಹುದು ಎನ್ನುವ ವಿಷಯ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು. 

ದಾವಣಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಮತ್ತು ಚಿಕ್ಕಬೆನ್ನೂರು ಶಾಲೆಗಳಿಗೆ ಭೇಟಿ ನೀಡಲಾಗಿದೆ. ಜಾಥಾ ಆರಂಭವಾದ ಮಾರ್ಗದಿಂದ ಬೆಂಗಳೂರು ತಲುಪುವ ತನಕ ಒಟ್ಟು ಏಳು ಜಿಲ್ಲೆಗಳಲ್ಲಿ ಜಾಥಾ ಹಾದು ಹೋಗಲಿದೆ. ಈ ಎಲ್ಲ ಜಿಲ್ಲೆಗಳ ಪೊಲೀಸ್‌ ಅಧೀಕ್ಷಕರು ಮತ್ತು ಆಯಾಯ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಂಪೂರ್ಣ ಬೆಂಬಲ ನೀಡಿ ಸಹಕರಿಸುತ್ತಿದೆ ಎಂದರು.

Advertisement

ಜಾಥಾದ ವೇಳೆ ಸಾರ್ವಜನಿಕರೊಂದಿಗೆ ನಡೆಸಿದ ಸಂವಾದ ಮತ್ತು ಬೀದಿ ನಾಟಕ ಸಂದರ್ಭದಲ್ಲಿ ಸಮಸ್ಯೆಗಳ ಕುರಿತು ಜನತೆ ನೀಡಿದ ಮಾಹಿತಿಯ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದರು.

ಜಾಥಾದಲ್ಲಿ ಪಾಲ್ಗೊಂಡಿರುವ ಕೆಎಸ್‌ ಆರ್‌ಪಿ ಮಹಿಳಾ ಪೊಲೀಸ್‌ ಸಿಬ್ಬಂದಿಗಳನ್ನು ಕೇರಳ ರಾಜ್ಯ ಸರ್ಕಾರದ ಅನುಮತಿ ಪಡೆದು ಮುಂದಿನ ವರ್ಷದಿಂದ ಶಬರಿಮಲೈ ಅಯ್ಯಪ್ಪಸ್ವಾಮಿ ಬಂದೋಬಸ್ತ್ಗೆ  ಕಳುಹಿಸುವ ಉದ್ದೇಶ ಹೊಂದಲಾಗಿದೆ. ಕಳೆದ ಡಿ. 5 ರಂದು ಬೆಳಗಾವಿಯಿಂದ
ಹೊರಟಿದ್ದು ಡಿ. 9  ರಂದು ಸೈಕಲ್‌ ಜಾಥಾ ಬೆಂಗಳೂರು ವಿಧಾನಸೌಧ ತಲುಪಲಿದ್ದಾರೆ ಎಂದು ತಿಳಿಸಿದರು.

ಮಹಿಳಾ ಐಎಎಸ್‌ ಅಧಿಕಾರಿ ಕೆ.ಆರ್‌. ನಂದಿನಿ, ಕೆಎಸ್‌ಆರ್‌ಪಿ ಪೊಲೀಸರು, ಇಬ್ಬರು ಪೊಲೀಸ್‌ ಅಧೀಕ್ಷಕಿ ಸವಿತಾ ಹೂಗಾರ್‌, ಮಂಗಳೂರಿನ ಎಸಿಬಿ ಪೊಲೀಸ್‌ ಅಧೀಕ್ಷಕಿ ಶೃತಿ, ಮೂವರು ವೃತ್ತ ನಿರೀಕ್ಷಕರು, ಪಿಎಸ್‌ಐಗಳು ಮತ್ತಿತರರು ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದರು. ಎಎಸ್ಪಿ ರಾಮ ಲಕ್ಷ್ಮಣ್‌ ಅರಸಿದ್ದಿ, ಡಿವೈಎಸ್ಪಿ ಸಂತೋಷ್‌, ಡಿವೈಎಸ್ಪಿ ತಿಪ್ಪೇಸ್ವಾಮಿ ದುರ್ಗಕ್ಕೆ ಆಗಮಿಸಿದ ಸೈಕಲ್‌ ಜಾಥಾಕ್ಕೆ ಸಾಥ್‌ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next