Advertisement

Cybercrime: ಸೈಬರ್‌ ಕ್ರೈಂ ರಾಷ್ಟ್ರೀಯ ಭದ್ರತೆಗೂ ಅಪಾಯ: ಸಿಎಂ ಸಿದ್ದರಾಮಯ್ಯ

12:44 AM Sep 14, 2023 | Team Udayavani |

ಬೆಂಗಳೂರು: ಸೈಬರ್‌ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕ್ರಿಯಾತ್ಮಕವಾಗಿರಬೇಕು. ವಿವಿಧ ಬಗೆಯ ಸೈಬರ್‌ ದಾಳಿಗಳು ನಡೆಯುತ್ತಿದ್ದು, ಆನ್‌ಲೈನ್‌ ಮೂಲಕ ಮೋಸ ಮಾಡುವ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ನಗರದಲ್ಲಿ ಬುಧವಾರ ನಡೆದ ದಕ್ಷಿಣ ಭಾರತ ರಾಜ್ಯಗಳ ಪೋಲೀಸ್‌ ಮಹಾ ನಿರ್ದೇಶಕರ‌ ಸಮನ್ವಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಸೈಬರ್‌ ಅಪರಾಧವು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿ ಎಂದು ತಿಳಿಸಿದರು.

ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಸೈಬರ್‌ ಅಪರಾಧಿಗಳನ್ನು ಮಟ್ಟಹಾಕಲು ಸಹಾಯಕವಾಗಿವೆ. 2003ರಲ್ಲಿ ಸೈಬರ್‌ ಅಪರಾಧಗಳ ಪೊಲೀಸ್‌ ಠಾಣೆಯನ್ನು ತೆರೆದ ಮೊದಲ ರಾಜ್ಯ ಕರ್ನಾಟಕವಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್‌ ಅಪರಾಧ ತಡೆಗಾಗಿ ಸಿಇಎನ್‌ ಪೋಲಿಸ್‌ ಠಾಣೆಗಳನ್ನು ರಾಜ್ಯ ಹೊಂದಿದೆ. ಇಂತಹ ಪ್ರಕರಣಗಳನ್ನು ನಿರ್ವಹಿಸಲೆಂದೇ ಸೈಬರ್‌ ಠಾಣೆಯ ಪೋಲಿಸ್‌ ಅಧಿಕಾರಿಗಳು ವಿಶೇಷ ತರಬೇತಿ ಪಡೆದಿದ್ದಾರೆ ಎಂದರು.

ತಂತ್ರಗಾರಿಕೆಯಲ್ಲಿ ಮಾರ್ಪಾಡು ಅಗತ್ಯ
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್‌ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೊಲೀಸ್‌ ತಂತ್ರಗಾರಿಕೆಯಲ್ಲೂ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ. ನವೀನ ಮಾದರಿ ಅಳವಡಿಸಿಕೊಳ್ಳಬೇಕು ಎಂದರು.

ಭಯೋತ್ಪಾದನಾ ಸಂಘಟನೆ ವಿರುದ್ಧ ಕ್ರಮ
ಭಯೋತ್ಪಾದನಾ ಚಟುವಟಿಕೆಗಳು ರಾಜ್ಯದಲ್ಲಿಯೂ ನಡೆದಿದ್ದು, ಇವುಗಳ ನಿಗ್ರಹಕ್ಕೆ ಮಾಹಿತಿ ಸಂಗ್ರಹಣೆ, ಸಮನ್ವಯ, ಸಹಕಾರ ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ. ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ನಿಗ್ರಹಿಸಲಾಗಿದ್ದರೂ, ಕರ್ನಾಟಕದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ಸಮಸ್ಯೆ ಮಟ್ಟಹಾಕಲು ಹೆಚ್ಚಿನ ಸಹಕಾರ ಅಗತ್ಯವಿದೆ. ಪೋಲಿಸ್‌ ಅಧಿಕಾರಿಗಳಿಗೆ ತಂತ್ರಜ್ಞಾನದ ಬಳಕೆ, ತರಬೇತಿ, ಸಾಮರ್ಥ್ಯ ವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲ ಪತ್ತೆ
ಮಾದಕವಸ್ತು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಪೋಲಿಸ್‌ ಅತ್ಯುತ್ತಮ ಕೆಲಸ ಮಾಡಿದ್ದು, ಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಪತ್ತೆ ಹಚ್ಚಲಾಗಿದೆ. ಡಾರ್ಕ್‌ವೆಬ್‌ ಮೂಲಕ ನಡೆಸುವ ಡ್ರಗ್ಸ್‌ ದಂಧೆ ಬೇಧಿಸಲಾಗಿದೆ. ಅಂತಾರಾಜ್ಯ ಅಪರಾಧಿಗಳು ಹಾಗೂ ಗ್ಯಾಂಗ್‌ಗಳ ಮೇಲೆ ನಿಗಾ ವಹಿಸಬೇಕು. ಈ ಕುರಿತು ವಿವಿಧ ರಾಜ್ಯಗಳ ನಡುವೆ ಸಮನ್ವಯ ಹಾಗೂ ಸಹಕಾರವಿದ್ದರೆ ಅಪರಾಧಿಗಳನ್ನು ಮಟ್ಟಹಾಕುವುದು ಸುಲಭ ಎಂದರು.

3 ತಿಂಗಳಲ್ಲಿ ಜಾಗ ಒದಗಿಸಲು ಸಿಎಂ ಸೂಚನೆ
ಬೆಂಗಳೂರು: ರಾಜ್ಯದಲ್ಲಿರುವ ಶ್ಮಶಾನ ಮತ್ತು ಖಬರ್‌ಸ್ಥಾನಗಳಿಗೆ ಮೂರು ತಿಂಗಳಲ್ಲಿ ಜಾಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು. ರಾಜ್ಯದಲ್ಲಿ ಯಾವುದೇ ಧರ್ಮ ಮತ್ತು ಜಾತಿಯವರು ಶ್ಮಶಾನ ಅಥವಾ ಖಬರ್‌ಸ್ಥಾನಗಳಿಗೆ ಜಾಗ ಒದಗಿಸುವಂತೆ ಕೋರಿದ್ದರೆ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸರಕಾರಿ ಜಾಗವನ್ನು ಒದಗಿಸಿ ಕೊಡಬೇಕು. ಸರಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಾಗ ಖರೀದಿಸಿ ಸಾರ್ವಜನಿಕ ಶ್ಮಶಾನ ಮತ್ತು ಖಬರ್‌ಸ್ಥಾನಗಳಿಗೆ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆ
ಅಲ್ಪಸಂಖ್ಯಾತರ ವಸತಿ ಶಾಲೆಗಳ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜು ಹಾಗೂ ಅಲ್ಪಸಂಖ್ಯಾಕರ ವಿದ್ಯಾರ್ಥಿ ನಿಲಯಗಳಿಗೆ 65 ಕಡೆಗಳಲ್ಲಿ ನಿವೇಶನ ಒದಗಿಸಲು ಹಾಗೂ ನಾಲ್ಕು ಕಡೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ 400 ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಒತ್ತುವರಿ ತೆರವುಗೊಳಿಸುವಂತೆಯೂ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next