Advertisement

Cyber ​​thieves: ರೂಪಾ ಅಯ್ಯರ್‌ಗೆ ವಂಚಿಸಲು ಸೈಬರ್‌ ಕಳರ ಯತ್ನ

11:41 AM May 11, 2024 | Team Udayavani |

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದ ಹೆಸರಿನಲ್ಲಿ ನಿರ್ದೇಶಕಿ ರೂಪಾ ಅಯ್ಯರ್‌ಗೆ 30 ಲಕ್ಷ ರೂ. ವಂಚಿಸಲು ಸೈಬರ್‌ ಕಳ್ಳರು ಯತ್ನಿಸಿದ್ದು, ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ರೂಪಾಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯು ಟ್ರಾಯ್‌ ಅಧಿಕಾರಿ ಸೋಗಿನಲ್ಲಿ ಪರಿಚಯಿಸಿಕೊಂಡಿದ್ದ. ನಿಮ್ಮ ಮೊಬೈಲ್‌ ನಂಬರ್‌ ದೇಶ ದ್ರೋಹಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಹೀಗಾಗಿ ನಿಮ್ಮ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಬೇಕು. ಮುಂಬೈ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ ಎಂದಿದ್ದ. ನಂತರ ಆತನ ಸೂಚನೆಯಂತೆ ರೂಪಾ ಅಯ್ಯರ್‌ ವಿಡಿಯೋ ಕರೆ ಮಾಡಿದ್ದರು. ಆ ವೇಳೆ ಮುಂಬೈ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ, ನಿಮ್ಮನ್ನು ಬಂಧಿಸಬೇಕು ಎಂದಿದ್ದ. ನರೇಶ್‌ ಗೋಯಲ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ವೇಳೆ ದೇಶದಲ್ಲಿ 247 ಜನರನ್ನು ಗುರುತಿಸಲಾಗಿದ್ದು, ಈ ಪೈಕಿ ನಿಮ್ಮ ಹೆಸರು ಕೇಳಿ ಬಂದಿದೆ.

ನೀವು ಖ್ಯಾತಿ ಪಡೆದಿರುವುದರಿಂದ ನಿಮಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಪೊಲೀಸರಿಗೆ ತಿಳಿಸಿಲ್ಲ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಪಾಲಕರು, ಪತಿಗೆ ಮಾಹಿತಿ ನೀಡಬೇಡಿ. ಆನ್‌ಲೈನ್‌ನಲ್ಲಿ 24 ಗಂಟೆಗಳ ಕಾಲ ವಿಚಾರಣೆ ನಡೆಸುವುದಾಗಿ ಹೇಳಿದ್ದ. ನಂತರ ಬ್ಯಾಂಕ್‌ ಖಾತೆಗಳು, ಉದ್ಯಮದ ಮಾಹಿತಿ ಪಡೆದಿದ್ದರು. ಗುರುವಾರ ಬೆಳಗ್ಗೆ ಮತ್ತೆ ವಿಡಿಯೋ ಕರೆ ಮಾಡಿ ವಿಚಾರಣೆ ನಡೆಸುವುದಾಗಿ ಹೇಳಿ ಕರೆ ಕಡಿತಗೊಳಿಸಿದ್ದರು.

ಹಣ ಜಮೆ ಮಾಡುವಂತೆ ಒತ್ತಾಯ: ಗುರುವಾರ ಬೆಳಗ್ಗೆ ವಿಡಿಯೋ ಕರೆ ಮಾಡಿ ಸಿಬಿಐ ಪರ ವಕೀಲ ವಿಕ್ರಂ ಗೋಸ್ವಾಮಿ ಹೆಸರಿನಲ್ಲಿ ವಿಚಾರಣೆಗೆ ಸುಪ್ರೀಂ ಕೊರ್ಟ್‌ನಿಂದ ಅನುಮತಿ ಪಡೆದಿರುವಂತೆ ನಕಲಿ ಪತ್ರ ಕಳಿಸಿದ್ದರು. ಜಾರಿ ನಿರ್ದೇಶನಾಲಯ (ಇಡಿ) ಹೆಸರಿನಲ್ಲಿದ್ದ ಕೆಲ ದಾಖಲೆ ಕಳುಹಿಸಿದ್ದರು. ನಂತರ ನಾವು ಹೇಳುವ ಬ್ಯಾಂಕ್‌ ಖಾತೆಗೆ 30 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಇದನ್ನು ನಂತರ ನಿಮಗೆ ಹಿಂತಿರುಗಿಸುವುದಾಗಿಯೂ ಭರವಸೆ ಕೊಟ್ಟಿದ್ದರು. ಆ ವೇಳೆ ರೂಪಾಗೆ ಅನುಮಾನ ಬಂದು, “ನನಗೆ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾ ಮಲೈ ಪರಿಚಯವಿದ್ದಾರೆ’ ಎಂದು ಹೇಳಿದ್ದರು. ನಂತರ ಪರಿಚಿತ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ ರೂಪಾ ಅಯ್ಯರ್‌ ಈ ಕುರಿತು ಮಾಹಿತಿ ನೀಡಿದ್ದರು. ಆಗ ಆ ಅಧಿಕಾರಿ ಇದು ಸೈಬರ್‌ ಕಳ್ಳರು ಹಣ ಪೀಕಲು ಯತ್ನಿಸುತ್ತಿದ್ದಾರೆ. ನೀವು ಹಣ ಜಮೆ ಮಾಡಬೇಡಿ ಎಂದಿದ್ದರು. ರೂಪಾ ಅಯ್ಯರ್‌ ಹಣ ಜಮೆ ಮಾಡುವುದಿಲ್ಲ ಎಂಬುದನ್ನು ಅರಿತ ಸೈಬರ್‌ ಕಳ್ಳರು ಕರೆ ಕಡಿತಗೊಳಿಸಿದ್ದರು. ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಗ್ಗಿನವರೆಗೂ ರೂಪಾ ಅಯ್ಯರ್‌ ಸೈಬರ್‌ ಕಳ್ಳರು ಹೆಣೆದ ಬಲೆಗೆ ಸಿಲುಕಿ ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿದ್ದರು. ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next