Advertisement
ಇಲ್ಲಿ 5 ತಿಂಗಳುಗಳಿಂದ ಖಾಯಂ ಪೊಲೀಸ್ ಇನ್‌ಸ್ಪೆಕ್ಟರ್ ಇರಲಿಲ್ಲ; ಎರಡು ದಿನಗಳ ಹಿಂದೆ ಒಬ್ಬರನ್ನು ನೇಮಕ ಮಾಡಲಾಗಿದೆ. ಠಾಣೆಯಲ್ಲಿ ಇದ್ದ ಇಬ್ಬರು ಸಬ್ ಇನ್‌ಪೆಕ್ಟರ್‌ಗಳೂ ಜೂನ್‌ನಲ್ಲಿ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಅವರ ಹುದ್ದೆಗಳೂ ಖಾಲಿ ಇವೆ.
ಸೈಬರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಸವಿತೃ ತೇಜ ಕಳೆದ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗುವಾಗ ವರ್ಗವಾಗಿದ್ದು, ತೆರ ವಾದ ಸ್ಥಾನಕ್ಕೆ ಚುನಾವಣೆ ಸಂದರ್ಭದಲ್ಲಿ ಸತೀಶ್ ನೇಮಕಗೊಂಡಿದ್ದರು. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಜೂ. 20ರಂದು ಸತೀಶ್ ಕೂಡ ಮಾತೃ ಠಾಣೆ (ಎಸಿಬಿ)ಗೆ ಮರಳಿದ್ದಾರೆ. ಸವಿತೃ ತೇಜ ಸಾಮಾನ್ಯ ವರ್ಗಾವಣೆಗೊಂಡು ಬೆಂಗಳೂರಿಗೆ (ಐಎಸ್‌ಡಿ) ತೆರಳಿದ್ದರಿಂದ ವಾಪಸಾಗಿಲ್ಲ. ಈ ಠಾಣೆಯಲ್ಲಿ ಎಸ್‌ಐ ಆಗಿದ್ದ ಚಂದ್ರಶೇಖರಯ್ಯ ಸುರತ್ಕಲ್ ಠಾಣೆಗೂ ಇನ್ನೋರ್ವ ಎಸ್‌ಐ ಕುಮಾರೇಶನ್ ಪಣಂಬೂರು ಠಾಣೆಗೂ ವರ್ಗವಾಗಿದ್ದಾರೆ. ಉಳಿದಂತೆ ಇತರ 18 ಮಂದಿ ಸಿಬಂದಿ ಮಾತ್ರ ಇದ್ದಾರೆ. ಇದೀಗ ಎರಡು ದಿನಗಳ ಹಿಂದೆ ಈ ಹಿಂದೆ ಮಂಗಳೂರಿನಲ್ಲಿ ಕೆಲಸ ಮಾಡಿದ್ದ ಓರ್ವ ಇನ್ಸ್‌ಪೆಕ್ಟರ್ ಅವರನ್ನು ಎರಡು ದಿನಗಳ ಹಿಂದೆ ಸೈಬರ್ ಠಾಣೆಗೆ ನೇಮಕ ಮಾಡಿದ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಉದಯವಾಣಿಗೆ ತಿಳಿಸಿದ್ದಾರೆ.
Related Articles
ಠಾಣೆಯ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ 185 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ತನಿಖಾಧಿಕಾರಿಯಾಗಿರುವ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆಯೇ 5 ತಿಂಗಳಿಂದ ಖಾಲಿ ಇದ್ದದ್ದು, ವಿಳಂಬಕ್ಕೆ ಕಾರಣ. ಪ್ರತೀ ದಿನ 2- 3 ಹೊಸ ಸೈಬರ್ ಅಪರಾಧ ಪ್ರಕರಣಗಳು ಸೇರ್ಪಡೆಗೊಳ್ಳುತ್ತಿದ್ದು, ಪಟ್ಟಿ ಬೆಳೆಯುತ್ತಲೇ ಇದೆ.
Advertisement
ಕೆಲವು ದಿನಗಳ ಹಿಂದೆ ಪ್ರಕರಣವೊಂದರ ತನಿಖೆ ತುರ್ತಾಗಿ ನಡೆಯಬೇಕಿತ್ತು. ಆಗ ಅನಿವಾರ್ಯವಾಗಿ ಬಂದರು (ಮಂಗಳೂರು ಉತ್ತರ) ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು ಅವರಿಗೆ ತನಿಖೆಯ ಪ್ರಭಾರವನ್ನು ಆಯುಕ್ತರು ವಹಿಸಿದ್ದರು. ಆದರೆ ಅವರಿಗೆ ಬಂದರು ಠಾಣೆಯ ಜವಾಬ್ದಾರಿಯೂ ಇರುವುದರಿಂದ ಸೈಬರ್ ಠಾಣೆ ಬಗ್ಗೆ ಗಮನ ಸಾಧ್ಯವಾಗುತ್ತಿರಲಿಲ್ಲ.
ಪರಿಣತ ಅಧಿಕಾರಿ ಬೇಕು
ಸೈಬರ್ ಠಾಣೆಗೆ ಇನ್‌ಸ್ಪೆಕ್ಟರ್ ನೇಮಕ ಮಾಡುವಂತೆ ನಿಕಟಪೂರ್ವ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದು, ಇದೀಗ ನಾನು ಕೂಡಾ ಪತ್ರ ಬರೆದಿದ್ದೇನೆ. ಎರಡು ದಿನಗಳ ಹಿಂದೆ ಒಬ್ಬರನ್ನು ನೇಮಕ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ಸೈಬರ್ ಅಪರಾಧಗಳ ತನಿಖೆಗೆ ಕಂಪ್ಯೂಟರ್ ಸೈನ್ಸ್ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿ ಇರುವವರನ್ನು ನೇಮಕ ಮಾಡುವ ಆವಶ್ಯಕತೆ ಇದೆ. ತಂತ್ರಜ್ಞಾನದಲ್ಲಿ ತ್ವರಿತಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ತಂತ್ರಜ್ಞಾನ ಬಳಸಿ ಕಳ್ಳರು ಅಪರಾಧ ಎಸಗುತ್ತಾರೆ. ನುರಿತ ಅಧಿಕಾರಿ ಇದ್ದರೆ ಮಾತ್ರ ಪರಿಣಾಮಕಾರಿ ತನಿಖೆ ಸಾಧ್ಯ.
– ಡಾ| ಹರ್ಷ ಪಿ.ಎಸ್.ಮಂಗಳೂರು ಪೊಲೀಸ್ ಆಯುಕ್ತರು
•ಹಿಲರಿ ಕ್ರಾಸ್ತಾ