Advertisement

ಇ-ಆಡಳಿತದಿಂದ ಸಾರ್ವಜನಿಕ ಸೇವೆಗೆ ವೇಗ

06:27 PM Mar 04, 2021 | Team Udayavani |

ಗದಗ: ಸಾರ್ವಜನಿಕ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸಲು ಹಾಗೂ ಕಚೇರಿ ಆಡಳಿತವನ್ನು ವ್ಯವಸ್ಥಿತವಾಗಿ ನಡೆಸಲು ಇ-ಆಡಳಿತ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಹೇಳಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಇ-ಆಡಳಿತ ದತ್ತಾಂಶ ವಿಶ್ಲೇಷಣಾ ಕೇಂದ್ರ, ಇ-ಆಡಳಿತ ಕೇಂದ್ರ ಮತ್ತು ಜಿಲ್ಲಾ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ “ಗ್ರೂಪ್‌-ಎ’ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಸೈಬರ್‌ ಸೆಕ್ಯೂರಿಟಿ ಮತ್ತು ಇ-ಆಡಳಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸುತ್ತ ಆಧುನಿಕರಣದ ಈ ಯುಗದಲ್ಲಿ ತಂತ್ರಜ್ಞಾನವು ತನ್ನದೇಯಾದ ಮಹತ್ವವನ್ನು ಪಡೆದಿದೆ. ಈ ಹಿಂದೆ ಸರಕಾರಿ ಕಚೇರಿಗಳಲ್ಲಿ ಕೈ ಬರಹದ ಮೂಲಕ ಆಡಳಿತ ನಡೆಸಲಾಗುತ್ತಿದ್ದು, ಕಾಲ ಬದಲಾದಂತೆ ಸರಕಾರಿ ಕಚೇರಿಗಳಲ್ಲಿ ಇ- ಆಡಳಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯವು ಇ-ಆಡಳಿತ ವ್ಯವಸ್ಥೆಯ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಇ-ಆಡಳಿತ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲು ಹಿಂಜರಿಕೆ ಮನೋಭಾವದಿಂದ ಹೊರ ಬರಬೇಕು. ಕಚೇರಿ ಆಡಳಿತದಲ್ಲಿ ಗಣಕೀಕರಣದಿಂದಾಗಿ ಸೈಬರ್‌ ಅಪರಾಧ ಹಾಗೂ ಮಾಹಿತಿ ಸೋರಿಕೆಯಾಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಎಪಿ ಯತೀಶ್‌ ಎನ್‌. ಮಾತನಾಡಿ, ಆಧುನಿಕರಣದ ಇಂದಿನ ಯುಗದಲ್ಲಿ ಪ್ರತಿಯೊಂದು ಕಾರ್ಯಗಳು ಗಣಕೀಕರಣವಾಗಿವೆ. ಜೊತೆಗೆ ಸೈಬರ್‌ ಅಪರಾಧಗಳೂ ಹೆಚ್ಚುತ್ತಿವೆ. ಸೈಬರ್‌ ಅಪರಾಧಗಳಲ್ಲಿ ವೈಯಕ್ತಿಕ ದಾಳಿಯಲ್ಲಿ ಕೇವಲ ಒಬ್ಬ ವ್ಯಕ್ತಿಗೆ ತೊಂದರೆ ಆಗಬಹುದು. ಅದೇ ಸರಕಾರಿ ಇಲಾಖೆ ಅಥವಾ ಸಂಸ್ಥೆಯ ಮೇಲೆ ಸೈಬರ್‌ ದಾಳಿಯಾದರೆ ಸರಕಾರಿ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಸುಗಮ ಆಡಳಿತಕ್ಕಾಗಿ ಅಧಿಕಾರಿ, ಸಿಬ್ಬಂದಿಗೆ ಒದಗಿಸಲಾದ ಬಳಕೆದಾರ ಹೆಸರು ಹಾಗೂ ಪಾಸ್‌ವರ್ಡ್‌ಗಳ ಗೌಪ್ಯತೆ ಕಾಪಾಡಬೇಕು ಎಂದು ಎಚ್ಚರಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಅವರು ಸೈಬರ್‌ ಅಪರಾಧಗಳು ಕುರಿತು, ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಅರುಣ್‌ ಕುಮಾರ್‌ ಆರ್‌. ಅವರು ಇ-ಆಡಳಿತ ಕುರಿತು ಉಪನ್ಯಾಸ ಮಂಡಿಸಿದರು.

ಜಿಪಂ ಸಿಇಒ ಭರತ ಎಸ್‌., ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕವಿತಾ ಎ.ಎಸ್‌., ಉಪ ಪ್ರಾಚಾರ್ಯ ಎನ್‌.ಎಸ್‌. ಸೋನೆ ಹಾಗೂ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next