Advertisement

Credit ಕಾರ್ಡ್‌ ಹೆಸರಲ್ಲಿ ಸೈಬರ್‌ ಲೂಟಿಕೋರರ ಕರೆ

08:57 PM Aug 08, 2024 | Team Udayavani |

ಉಡುಪಿ: ಕ್ರೆಡಿಟ್‌ ಕಾರ್ಡ್‌ ಹೆಸರಲ್ಲಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಸೈಬರ್‌ ಲೂಟಿಕೋರರು ಕರೆ ಹಾಗೂ ಸಂದೇಶ ಕಳುಹಿಸಿದ್ದು, ಆದರೆ ಸೂಕ್ತ ಸಮಯಪ್ರಜ್ಞೆಯಿಂದ ಅವರು ಮೋಸಕ್ಕೆ ಗುರಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.

Advertisement

ಸಂದೇಶದಲ್ಲಿದ್ದ ಲಿಂಕ್‌ ಓಪನ್‌ ಮಾಡಿದಾಗ ಲಕ್ಷಾಂತರ ರೂ.ಮಂಗ ಮಾಯವಾಗುವ ಸಾಧ್ಯತೆಗಳಿತ್ತು.

ಉಡುಪಿಯ ನ್ಯಾಯವಾದಿಯೊಬ್ಬರಿಗೆ ಆ.8ರಂದು 09341427331 ಸಂಖ್ಯೆಯಿಂದ ಬೆಳಗ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ “ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಕೇಂದ್ರ ಕಚೇರಿ ನೋಯಿಡಾದಿಂದ ಮಾತನಾಡುವುದು. ನಿಮಗೆ 5 ಲ.ರೂ.ಕ್ರೆಡಿಟ್‌ ಲಿಮಿಟನ್ನು ಜಾಸ್ತಿ ಮಾಡಲಾಗಿದೆ. ಮತ್ತು ಹೆಚ್ಚಿನ ವಿಚಾರಕ್ಕಾಗಿ ನಿಮಗೆ ಬ್ಯಾಂಕಿನಿಂದ ಒಂದು ಲಿಂಕ್‌ ಅನ್ನು ಕಳುಹಿಸಿದ್ದೇವೆ’ ಎಂದು ಹಿಂದಿಯಲ್ಲಿ ಬಹಳ ಆತ್ಮೀಯವಾಗಿ ಮಾತನಾಡಿದ.

ಸಂಶಯಗೊಂಡ ನ್ಯಾಯವಾದಿ ಎಸ್‌.ಬಿ.ಐ. ಕೇಂದ್ರ ಕಚೇರಿ ಇರುವುದು ಮುಂಬಯಿಯಲ್ಲಿ. ನೋಯಿಡಾದಲ್ಲಿ ಯಾವುದೇ ಕೇಂದ್ರ ಕಚೇರಿ ಇರುವುದಿಲ್ಲ. ಕರೆ ಮಾಡಿದ ವ್ಯಕ್ತಿಯು ನ್ಯಾಯವಾದಿಯ ಹೆಸರು, ತಂದೆ ಹೆಸರು, ಸ್ಟೇಟ್‌ ಬ್ಯಾಂಕಿನ ಖಾತೆ ಇರುವ ಶಾಖೆಯ ಹೆಸರನ್ನು ಸ್ಪಷ್ಟವಾಗಿ ಹೇಳುತ್ತಾರೆ ಮತ್ತು ಇತ್ತೀಚೆಗೆ ಕ್ರೆಡಿಟ್‌ ಕಾರ್ಡ್‌ನಿಂದ ಖರೀದಿ ಮಾಡಿದ ವಿವರಗಳನ್ನು ಸಹ ಹೇಳುತ್ತಾರೆ. ಇದರೊಂದಿಗೆ ನಿಮ್ಮ ಖಾತೆ ಇರುವ ಶಾಖೆಯಿಂದ ನೀವು ಮಾತ್ರ ಸೆಲೆಕ್ಟ್ ಆಗಿದ್ದೀರಿ. 1 ವರ್ಷದಲ್ಲಿ 5 ಲ.ರೂ. ಸಂಪೂರ್ಣ ಉಪಯೋಗಿಸಿದರೆ ಯಾವುದೇ ಬಡ್ಡಿ ಇರುವುದಿಲ್ಲ ಮತ್ತು ನಿಮಗೆ ಈ ಸೌಲಭ್ಯ ಬೇಕಾದರೆ ಕಳುಹಿಸಿದ ಲಿಂಕ್‌ ಅನ್ನು ಓಪನ್‌ ಮಾಡಿ ಅದರ ಹಾರ್ಡ್‌ ಕಾಪಿಯನ್ನು ನಿಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಯ ಶಾಖಾ ವ್ಯವಸ್ಥಾಪಕರಲ್ಲಿ ನೀಡಿ ಎಂದು ತಿಳಿಸಿದರು. ಅನಂತರ ನ್ಯಾಯವಾದಿಗೆ ಕರೆ ಮಾಡಿದವರ ವ್ಯಕ್ತಿಯ ಹುದ್ದೆ, ಎಂಪ್ಲಾಯಿ ಕೋಡ್‌ ಹೆಸರು ಕೇಳಿದಾಗ ತನ್ನ ಹೆಸರು ಅಜಿತ್‌ ಅಗರ್‌ವಾಲ್‌ ಎಂದು ಹೇಳಿ ಫೋನ್‌ ಕರೆಯನ್ನು ಮುಕ್ತಾಯಗೊಳಿಸಿದ ಎನ್ನಲಾಗಿದೆ.

ಈ ಬಗ್ಗೆ ನ್ಯಾಯವಾದಿಯು ಖಾತೆ ಇರುವ ಉಡುಪಿಯ ಎಸ್‌.ಬಿ.ಐ. ಶಾಖೆಗೆ ಫೋನ್‌ ಮಾಡಿ ಕೇಳಿದಾಗ ಇಂತಹ ಯಾವುದೇ ತರಹ ಕ್ರೆಡಿಟ್‌ ಕಾರ್ಡ್‌ನ ಮಿತಿಯನ್ನು ಹೆಚ್ಚುವರಿ ಮಾಡುವ ಸೇವೆಗಳಿಲ್ಲ. ಯಾವುದೇ ಕಾರಣಕ್ಕೂ ಲಿಂಕ್‌ ಅನ್ನು ಓಪನ್‌ ಮಾಡಬೇಡಿ ಎಂದು ಸೂಚನೆ ಕೊಟ್ಟರು. ಒಂದು ವೇಳೆ ಲಿಂಕ್‌ ಅನ್ನು ಓಪನ್‌ ಮಾಡಿದರೆ ಲಕ್ಷಾಂತರ ರೂ.ಸೈಬರ್‌ ಕಳ್ಳರ ಪಾಲಾಗುತ್ತಿತ್ತು. ಇಂತಹ ಕರೆಗಳು, ಲಿಂಕ್‌ಗಳೂ ಬಂದಾಗ ಯಾವುದೇ ಕಾರಣಕ್ಕೂ ಲಿಂಕ್‌ ಅನ್ನು ಓಪನ್‌ ಮಾಡದೆ, ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ತಿಳಿಸಬೇಕು ಎಂದು ನ್ಯಾಯವಾದಿ ಆನಂದ ಮಾಡಿವಾಳ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next