ನೋಯ್ಡಾ: ಸ್ಮಾರ್ಟ್ ಫೋನ್ ಗಳ ಕಾಲದಲ್ಲಿ ಸೈಬರ್ ಫ್ರಾಡ್ ಗಳು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ. ನೋಯ್ಡಾದಲ್ಲಿ ಆನ್‌ಲೈನ್ ಟ್ರೇಡಿಂಗ್ ವಂಚನೆಯಲ್ಲಿ ಸೈಬರ್ ವಂಚಕರು ವಾಟ್ಸಾಪ್ ಮೆಸೆಂಜರ್ ಮೂಲಕ ಉದ್ಯಮಿಯೊಬ್ಬರಿಗೆ ರೂ. 9 ಕೋಟಿಗೂ ಹೆಚ್ಚು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಸೆಕ್ಟರ್ 40 ರ ನಿವಾಸಿ ರಜತ್ ಬೋತ್ರಾ ಅವರು ಮೇ 1 ರಂದು ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಕುರಿತ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ ನಂತರ ಒಂದು ತಿಂಗಳ ಅವಧಿಯಲ್ಲಿ ವಂಚನೆ ನಡೆದಿದೆ. ಸೆಕ್ಟರ್ ನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶುಕ್ರವಾರ ರೂ 1.62 ಕೋಟಿ ವ್ಯವಹಾರದ ಹಣವನ್ನು ಉದ್ಯಮಿಯ ಖಾತೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು, ಹೆಚ್ಚಿನ ತನಿಖೆ ನಡೆಯುತ್ತಿದೆ.
‘‘ಮೇ 1ರಂದು ತನ್ನನ್ನು ವಾಟ್ಸಾಪ್ ಗ್ರೂಪ್ ಗೆ ಸೇರಿಸಿರುವುದಾಗಿ ಬೋತ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರೂಪ್ ಗೆ ಷೇರು ಮಾರುಕಟ್ಟೆ ವಹಿವಾಟಿನಿಂದ ಲಾಭದ ಬಗ್ಗೆ ಮಾಹಿತಿ ಬರುತ್ತಿತ್ತು. ಅಂದಿನಿಂದ ಅವರು ಸಣ್ಣ ಪ್ರಮಾಣದ ಹೂಡಿಕೆಗಳನ್ನು ಪ್ರಾರಂಭಿಸಿದರು. ಮೇ 27 ರ ವೇಳೆಗೆ ಅವರು ಷೇರು ವಹಿವಾಟಿನಲ್ಲಿ ರೂ. 9.09 ಕೋಟಿ ಹೂಡಿಕೆ ಮಾಡಿದ್ದರು. ಆದಾಗ್ಯೂ, ಇದರ ನಂತರ, ಅವರ ಟ್ರೇಡಿಂಗ್ ಖಾತೆಯನ್ನು ಮುಚ್ಚಲಾಯಿತು” ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ ಪೊಲೀಸ್ ಠಾಣೆ) ವಿವೇಕ್ ರಂಜನ್ ರೈ ಹೇಳಿದ್ದಾರೆ.
ನಮಗೆ ದೂರು ಬಂದ ತಕ್ಷಣ ತನಿಖೆ ಆರಂಭಿಸಿದ್ದು, ಈವರೆಗೆ ಅವರ ಬ್ಯಾಂಕ್ ಖಾತೆಯಲ್ಲಿ ₹ 1.62 ಕೋಟಿಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ರೈ ಹೇಳಿದ್ದಾರೆ.
ಚೆನ್ನೈ, ಅಸ್ಸಾಂ, ಭುವನೇಶ್ವರ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಂಚಿತ ಹಣವನ್ನು ವರ್ಗಾವಣೆ ಮಾಡಿರುವ ಬ್ಯಾಂಕ್ ಖಾತೆಗಳು ತನಿಖೆಯ ವೇಳೆ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.