Advertisement

ಮತ್ತೆ ಮತ್ತೆ ಬಕರಾ

03:10 PM Aug 06, 2018 | Team Udayavani |

ಮಂಗಳೂರು: ವರ್ಷದ ಹಿಂದೆ ಎಟಿಎಂ ಕಾರ್ಡ್‌ ನಂಬರ್‌ ಹೇಳಿ ಹಣ ಕಳೆದುಕೊಂಡವರು ಮತ್ತೆ ಮತ್ತೆ ಹಣ ಕಳೆದುಕೊಂಡು ಬಕರಾಗಳಾಗುತ್ತಿದ್ದಾರೆ. ಇಂಥ ಎರಡು ದೂರುಗಳು ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಗೆ ಇತ್ತೀಚೆಗೆ ಬಂದಿವೆ.

Advertisement

ಕಳೆದ ಅಕ್ಟೋಬರ್‌ನಲ್ಲಿ ಸೈಬರ್‌ ಅಪರಾಧ ಪೊಲೀಸ್‌ ಠಾಣೆ ಸ್ಥಾಪನೆ ಆದ ಬಳಿಕ ಸುಮಾರು 80 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಜು. 6ರಿಂದ ಆ. 3ರ ನಡುವೆ 2 ಕೇಸುಗಳು ದಾಖಲಾಗಿವೆ. ಬಹುಮಾನ ಬಂದಿದೆ, ಲಾಟರಿಯಲ್ಲಿ ಹಣ ಬಂದಿದೆ ಎಂದು ನಂಬಿಸಿ ವಂಚನೆ; ವೈವಾಹಿಕ ಸಂಬಂಧ, ವಿದೇಶದಲ್ಲಿ ಉದ್ಯೋಗಾವಕಾಶದ ಆಮಿಷ ತೋರಿಸಿ ವಂಚನೆ, ಒಟಿಪಿ ನಂಬರ್‌ ಪಡೆದು ಹಣ ಡ್ರಾ, ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ಮೋಸ ಪ್ರಕರಣಗಳು ನಡೆಯುತ್ತಲೇ ಇವೆ. ಪ್ರತಿನಿತ್ಯ ಕನಿಷ್ಠ ಒಬ್ಬರಾದರೂ ಮೋಸ ಹೋಗುತ್ತಿದ್ದು, ಈ ಪೈಕಿ ಬಹುತೇಕ ಮಂದಿ ದೂರು ಕೊಡುವುದಿಲ್ಲ. 

ಮೋಸ ಹೋಗುವರಲ್ಲಿ ಬಹಳಷ್ಟು ಮಂದಿ ಸುಶಿಕ್ಷಿತರೇ ಆಗಿರುತ್ತಾರೆ ಹಾಗೂ ಅನಾಮಧೇಯ ಕರೆ ಅಥವಾ ಎಸ್‌ಎಂಎಸ್‌ಗಳಿಗೆ ಮಾರು ಹೋಗಿ ಆಧಾರ್‌/ ಒಟಿಪಿ ನಂಬ್ರ ನೀಡಿ ಬಕರಾಗಳಾಗುತ್ತಿದ್ದಾರೆ. ಕೆಲವರು ಅತ್ಯಾಸೆಗೆ ಬಲಿಯಾಗಿ ಮತ್ತೆ ಮತ್ತೆ ಹಣ ಕಳುಹಿಸಿ ವಂಚಿಸಲ್ಪಡುತ್ತಿರುವುದು ವಿಶೇಷ. ಐಟಿ ಇಲಾಖೆಯ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣವಂತರ ಬ್ಯಾಂಕ್‌ ಖಾತೆ ಮಾಹಿತಿ ಸಂಗ್ರಹಿಸುತ್ತಾರೆ ಎನ್ನುವುದು ಈಗ ಬೆಳಕಿಗೆ ಬಂದ ಹೊಸ ವಿಚಾರ.
ಜೂನ್‌, ಜುಲೈ ಐಟಿ ರಿಟರ್ನ್ಸ್ ಸಲ್ಲಿಸುವ ಅವಧಿಯಾಗಿದ್ದು, ವಂಚಕರು ಇದರ ಪ್ರಯೋಜನ ಪಡೆಯಲು ಹವಣಿಸಿದ್ದಾರೆ. ಐಟಿ ಇಲಾಖೆಯವರು ಎಂದು ನಂಬಿಸಿ ರಿಟರ್ನ್ಸ್ ಸಲ್ಲಿಸುವಂತೆ ಸಂದೇಶ ಕಳುಹಿಸುತ್ತಾರೆ. ಇದು ಸತ್ಯ ಎಂದೇ ನಂಬುವ ಕೆಲವರು ಗೌಪ್ಯ ವಿವರ ನೀಡಿ ಮೋಸ ಹೋಗಿದ್ದಾರೆ. 

ಕೋಲ್ಕತ್ತಾಕ್ಕೆ ಹೋದರೂ ಪ್ರಯೋಜನವಿಲ್ಲ
ಅನಾಮಧೇಯ ವ್ಯಕ್ತಿಗಳು ಪಶ್ಚಿಮ ಬಂಗಾಲ, ಅಸ್ಸಾಂ ಉತ್ತರ ಭಾರತದ ರಾಜ್ಯಗಳಲ್ಲಿದ್ದುಕೊಂಡು ಈ ರೀತಿಯ ವಂಚನೆ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಮಂಗಳೂರಿನ ಸೈಬರ್‌ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್‌ ಸವಿತೃತೇಜ ನೇತೃತ್ವದ ತಂಡವನ್ನು ಮಂಗಳೂರಿನ ಪೊಲೀಸ್‌ ಕಮಿಷನರ್‌ ಇತ್ತೀಚೆಗೆ ಕೊಲ್ಕತ್ತಾಕ್ಕೆ ಕಳುಹಿಸಿದ್ದರು. ತಂಡ 9 ದಿನಗಳ ಕಾಲ ಕೊಲ್ಕತ್ತಾದ ವಿವಿಧ ಭಾಗಗಳಲ್ಲಿ ಸುತ್ತಾಡಿ ಅಲ್ಲಿನ ಪೊಲೀಸರ ಸಹಾಯದಿಂದ ತನಿಖೆ ನಡೆಸಿದರೂ ಆರೋಪಿಗಳ ಸುಳಿವು ಲಭ್ಯವಾಗದೆ ಮರಳಿದೆ. 

ಅನಾಮಧೇಯ ವ್ಯಕ್ತಿಗಳ ಕರೆಯ ಜಾಡು ಹಿಡಿದು ಇಲ್ಲಿನ ಪೊಲೀಸರನ್ನು ಕೋಲ್ಕತಾಗೆ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಕರೆ ಮಾಡಿ ಹಣ ಎಗರಿಸುವವರು ಮೊಬೈಲ್‌ ಸಿಮ್‌ ಎಸೆದು ಬೇರೆ ಸಿಮ್‌ ಉಪಯೋಗಿಸುತ್ತಾರೆ. ಸ್ಥಳೀಯ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್‌ ಜತೆಗೂ ಸಂಪರ್ಕ ಇರಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ನಾಗರಿಕರಿಗೆ ಸೈಬರ್‌ ವಂಚನೆ ಬಗ್ಗೆ ಜಾಗೃತಿ ಮೂಡಿಸುವುದೇ ಏಕೈಕ‌ ಪರಿಹಾರ.
ಟಿ.ಆರ್‌. ಸುರೇಶ್‌, ಪೊಲೀಸ್‌ ಕಮಿಷನರ್‌ 

Advertisement

ಜನ ಈ ರೀತಿ ಮೋಸ ಹೋಗುವುದಕ್ಕೆ ಅತಿ ಆಸೆಯೇ ಕಾರಣ. ಸುಶಿಕ್ಷಿತರು, ತಿಳಿದವರೇ ಮೋಸ ಹೋಗುತ್ತಾರೆ. ಅನಾಮಧೇಯ ಸಂದೇಶಗಳಿಗೆ ಅಥವಾ ಮೊಬೈಲ್‌ ಕರೆಗೆ ಮಾರು ಹೋಗಿ ಹಿಂದೆ ಮುಂದೆ ನೋಡದೆ ಮೊದಲು ಸ್ವಲ್ಪ ಹಣ ಕಳುಹಿಸುತ್ತಾರೆ. ಮತ್ತೆ ಮತ್ತೆ ಕರೆ ಬಂದಾಗ ಪುನಃ ಕಳುಹಿಸುತ್ತಾರೆ. ಕೊನೆಗೆ ಮೋಸ ಹೋಗಿರುವುದು ಅರಿವಾದಾಗ ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗುತ್ತಾರೆ. 
ಸವಿತೃತೇಜ, ಸೈಬರ್‌ ಠಾಣೆ ಇನ್ಸ್‌ಪೆಕ್ಟರ್‌

*ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next