ದೇವನಹಳ್ಳಿ: ಮಾಹಿತಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳೊಂದಿಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕಡಿವಾಣಕ್ಕೆ ಸೂಕ್ತ ಕಾನೂನಿನ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ಉತ್ಛ ನ್ಯಾಯಾಲಯದ ನ್ಯಾಯಾಧೀಶರು, ಕರ್ನಾಟಕ ಜುಡಿಶೀಯಲ್ ಅಕಾಡೆಮಿಯ ಅಧ್ಯಕ್ಷೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ನ್ಯಾಯಾಧೀಶೆ ಬಿ.ವಿ.ನಾಗರತ್ನ ಹೇಳಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಜುಡಿಶೀಯಲ್ ಅಕಾಡೆಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜುಡಿಶೀಯರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾದ “”ವಿದ್ಯುನ್ಮಾನ ಪುರಾವೆಗಳು(Electronic evidence)” ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಾಗ ಮತ್ತು ನ್ಯಾಯಾಂಗದಲ್ಲಿ ಅಪರಾಧ ಪ್ರಕರಣಗಳ ಕುರಿತು ಪರಿಶೀಲಿಸುವಾಗ ಬಹುತೇಕ ಪ್ರಕರಣಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದು ಇಪ್ಪತ್ತು ವರ್ಷ ಕಳೆದಿದ್ದು, ಸೂಕ್ತ ಕಾನೂನಿನ ಅರಿವು ಇಲ್ಲದಿರುವುದರಿಂದ ತಂತ್ರಜ್ಞಾನ ಬೆಳೆದಂತೆ ಸೈಬರ್ ಕ್ರೈಂ, ಡಿಜಿಟಲ್ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ತಂತ್ರಜ್ಞಾನದ ದುರ್ಬಳಕೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಸೈಬರ್ ಸೆಕ್ಯೂರಿಟಿ ಮತ್ತು ಕಾನೂನು ತರಬೇತುದಾರ ಡಾ. ಅನಂತಪ್ರಭು ಮಾತನಾಡಿ, ಸೈಬರ್ ಸೆಕ್ಯೂರಿಟಿ ಹಾಗೂ ಡಿಜಿಟಲ್ ಹ್ಯಾಕಿಂಗ್ ವಿಷಯದ ಕುರಿತು ಪೊಲೀಸ್ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉತ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕರ್ನಾಟಕ ಜುಡಿಶೀಯಲ್ ಅಕಾಡೆಮಿಯ ಗವರ್ನರ್ ಕೆ.ಎನ್.ಫಣೀಂದ್ರ,
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜು, ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ, ಕರ್ನಾಟಕ ಜುಡಿಶೀಯಲ್ ಅಕಾಡೆಮಿಯ ನಿರ್ದೇಶಕರಾದ ಪ್ರಭಾವತಿ.ಎಂ.ಹಿರೇಮಠ, ನಿವೃತ್ತ ಜಿಲ್ಲಾ ನ್ಯಾಯಾ ಧೀಶರಾದ ಎಸ್.ಆರ್.ಸೋಮಶೇಖರ್
ಸೇರಿದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ನಮಿತಾ ಮಹೇಶ್.ಬಿ.ಜಿ, ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ಯಶವಂತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ನ್ಯಾಯಾಂಗ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.