Advertisement

Fraud: ಡ್ರಗ್ಸ್‌ ಕೇಸ್‌ ಎಂದು ಬೆದರಿಸಿದ್ದಕ್ಕೆ 13 ಲಕ್ಷ ರೂ.ನಾಮ ಹಾಕಿಸಿಕೊಂಡ ಶ್ರೀನಿವಾಸ!

11:26 AM Sep 24, 2023 | Team Udayavani |

ಬೆಂಗಳೂರು: ಮುಂಬೈನಿಂದ ತೈವಾನ್‌ಗೆ ನಿಮ್ಮ ಹೆಸರಿನಲ್ಲಿ ಡ್ರಗ್ಸ್‌ ಪಾರ್ಸೆಲ್‌ ಹೋಗುತ್ತಿದೆ ಎಂದು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್‌ ಕಳ್ಳರು 13.64 ಲಕ್ಷ ರೂ. ವಂಚಿಸಿದ್ದಾರೆ. ಗಿರಿನಗರದ ನಿವಾಸಿ ಶ್ರೀನಿವಾಸ ಜೋಯಿಸ್‌ (54) ವಂಚನೆಗೊಳಗಾದವರು.

Advertisement

ಸೆ.13ರಂದು ಶ್ರೀನಿವಾಸ್‌ಗೆ ಅಪರಿಚಿತರು ಕರೆ ಮಾಡಿ ಫೆಡೆಕ್ಸ್‌ ಕೊರಿಯರ್‌ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿದ್ದ. ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್‌ ದೇಶಕ್ಕೆ ಕೊರಿಯರ್‌ ಮೂಲಕ 150 ಗ್ರಾಂ ಎಂಡಿಎಂಎ ಮಾದಕ ವಸ್ತು ಅಕ್ರಮವಾಗಿ ಪಾರ್ಸೆಲ್‌ ಹೋಗುತ್ತಿರುವುದು ಗೊತ್ತಾಗಿದೆ. ನಿಮ್ಮ ಕರೆಯನ್ನು ಇದೀಗ ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ಕಳುಹಿಸುವುದಾಗಿ ನಂಬಿಸಿದ್ದ. ಆ ವೇಳೆ ಶ್ರೀನಿವಾಸ್‌ ಜೊತೆಗೆ ಮಾತನಾಡಿದ ಮತ್ತೋರ್ವ ವ್ಯಕ್ತಿ ತನ್ನನ್ನು ಸಿಬಿಐ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಡ್ರಗ್ಸ್‌ ವಿದೇಶಕ್ಕೆ ಹೋಗುತ್ತಿದೆ ಎಂದು ಹೇಳಿದ್ದ.

ಬಳಿಕ ಸ್ಕೈಪ್‌ ಆ್ಯಪ್‌ ಮೂಲಕ ವಿಡಿಯೋ ಕರೆ ಮಾಡಿ ನಕಲಿ ಐಡಿ ಕಾರ್ಡ್‌ ತೋರಿಸಿದ್ದ. ಆರ್‌ಬಿಐನಿಂದ ಹೆಸರು, ಫೋಟೊ, ಆಧಾರ್‌ ಕಾರ್ಡ್‌ ಪಡೆದುಕೊಂಡಿರುವುದಾಗಿ ಅಪರಿಚಿತ ತಿಳಿಸಿದ್ದ. ಈ ಕೇಸ್‌ ಮುಕ್ತಾಯಗೊಳಿಸಲು ನಮ್ಮ ಬ್ಯಾಂಕ್‌ ಖಾತೆಗೆ ದುಡ್ಡು ಹಾಕುವಂತೆ ಸೂಚಿಸಿ ಶ್ರೀನಿವಾಸ್‌ ಅವರಿಂದ ಹಂತ- ಹಂತವಾಗಿ 13.64 ಲಕ್ಷ ರೂ. ಹಾಕಿಸಿಕೊಂಡಿದ್ದ. ಅನುಮಾನ ಬಂದು ಶ್ರೀನಿವಾಸ್‌ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next