ಬೆಂಗಳೂರು: ಸೈಬರ್ ಅಪರಾಧಗಳ ಕಡಿವಾಣಕ್ಕೆ ಒಂದಿಲ್ಲೊಂದು ಕಠಿಣ ಕ್ರಮಕೈಗೊಳ್ಳುತ್ತಿರುವ ನಗರ ಪೊಲೀಸರು ಇದೀಗ ಮತ್ತೂಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸೈಬರ್ ಕ್ರೈಂಗೆ ಬಳಸಿಕೊಂಡಿರುವ ಸಿಮ್ ಕಾರ್ಡ್‌ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಲು ಆರಂಭಿಸಿದ್ದಾರೆ. ಕಳೆದ 25 ದಿನಗಳಲ್ಲಿ ಬರೋಬರಿ 15,500 ಸಿಮ್‌ಕಾರ್ಡ್ ಬ್ಲಾಕ್ ಮಾಡಲಾಗಿದೆ. ಇತ್ತೀಚೆಗೆ ರಕ್ತಸಿಕ್ತ ಅಪರಾಧಗಳಿಗಿಂತ ಸೈಬರ್ ಕ್ರೈಂ ಅಪರಾಧಗಳೇ ಹೆಚ್ಚಾಗಿವೆ. ಸರ್ಕಾರಗಳು ಎಷ್ಟೇ ಕಠಿಣ ಕ್ರಮಕೈಗೊಂಡರೂ ತೆರೆಮರೆಯಲ್ಲಿ ಕೂತು ಎಸಗುವ ಈ ಅಪರಾಧ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಮತ್ತೂಂದೆಡೆ ಸೈಬರ್ ಕ್ರೈಂ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ, ವಿದ್ಯಾವಂತರೇ ವಂಚನೆಗೊಳಗಾಗುತ್ತಿರುವುದು ಪೊಲೀಸರಲ್ಲೂ ಗೊಂದಲ ಸೃಷ್ಟಿಸಿದೆ.
ದೂರುದಾರರ ಹಣ ಜಪ್ತಿ: ಈ ಮಧ್ಯೆ ಕೇಂದ್ರ ಸರ್ಕಾರ ಸೈಬರ್ ಕ್ರೈಂ ತಡೆಗೆ ಯೂನಿವರ್ಸಲ್ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಜಾರಿಗೆ ತಂದಿದ್ದು. ಈ ಮೂಲಕ ಸೈಬರ್ ವಂಚನೆಗೊಳಗಾದ ಕೂಡಲೇ ದೂರು ನೀಡಬಹುದು. ಹಾಗೆಯೇ 112ಗೆ ಕರೆ ಮಾಡಿಯೂ ದೂರುಗಳು ಬರುತ್ತವೆ. ಜತೆಗೆ ಸ್ಥಳೀಯ ಠಾಣೆಗಳಲ್ಲೂ ದೂರುಗಳು ದಾಖಲಾಗುತ್ತವೆ. ಜತೆಗೆ ನಗರ ಪೊಲೀಸ್ ವಿಭಾಗವೂ ಸಿಐಆರ್ (ಸೈಬರ್ ಇನ್ಫಾರ್ಮೇಷನ್ ರಿಪೋರ್ಟ್) ಮೂಲಕ ದೂರುದಾರರ ಹಣವನ್ನು ಜಪ್ತಿ ಮಾಡುತ್ತಿದೆ.
ಐಸಿಸಿಸಿಸಿ ಮೂಲಕ 15 ಸಾವಿರ ಸಿಮ್ ಬ್ಲಾಕ್: ಕಳೆದ 8 ತಿಂಗಳಲ್ಲಿ ನಗರದ 9 ಸೆನ್ ಠಾಣೆಗಳಲ್ಲಿ ಬರೋಬರಿ 17 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಬಳಸಿದ ಸಿಮ್‌ಕಾರ್ಡ್‌ಗಳ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಸಿಬ್ಬಂದಿ ಸಂಗ್ರಹಿಸುತ್ತಾರೆ. ಆ ನಂತರ ಕೇಂದ್ರ ಸರ್ಕಾರದ ಇಂಡಿಯನ್ ಸೈಬರ್ ಕ್ರೈಂ ಕೋ-ಆರ್ಡಿನೇಷನ್ ಕಮಿಟಿ(ಐಸಿಸಿಸಿಸಿ)ಗೆ ಮಾಹಿತಿ, ಅದರ ವೆಬ್ ಪೋರ್ಟಲ್‌ಗೆ ವಂಚಕರು ಬಳಸಿದ ಮೊಬೈಲ್ ನಂಬರ್ ನೋಂದಾಯಿಸಲಾಗಿದೆ. ಆ ನಂತರ ಕೇವಲ 24 ಗಂಟೆಯಲ್ಲೇ ಆ ಸಿಮ್ ಕಾರ್ಡ್ ಅನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗುತ್ತದೆ. ಈ ಪ್ರಕ್ರಿಯೆ ಆ.16ರಿಂದ ಆರಂಭವಾಗಿದ್ದು, ನಿರಂತರವಾಗಿ ನಡೆಯುತ್ತಿದೆ. ಕಳೆದ 26 ದಿನಗಳಲ್ಲಿ 15,500 ಸಿಮ್ ಕಾರ್ಡ್ ಬ್ಲಾಕ್ ಮಾಡಲಾಗಿದೆ ಎಂದು ಕಮಾಂಡ್ ಸೆಂಟರ್ ಅಧಿಕಾರಿಗಳು ಮಾಹಿತಿ ನೀಡಿದರು.
ಸೈಬರ್ ಕ್ರೈಂ ಕೃತ್ಯಕ್ಕೆ ಬಳಸಿದ ಸಿಮ್‌ಕಾರ್ಡ್ ಗಳನ್ನು ಪತ್ತೆ ಹಚ್ಚಿ ಬ್ಲಾಕ್ ಮಾಡಲಾಗುತ್ತಿದೆ. ಏಕೆಂದರೆ, ಒಬ್ಬರಿಗೆ ವಂಚನೆ ಮಾಡಿದ ಬಳಿಕ ಆರೋಪಿಗಳು ಅದೇ ನಂಬರ್ ಬಳಸಿ ಮತ್ತೂಬ್ಬ ವ್ಯಕ್ತಿಗೆ ವಂಚನೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರದ ವೆಬ್‌ಪೋರ್ಟಲ್ ಮೂಲಕ ವಂಚಕರ ಸಿಮ್‌ಕಾರ್ಡ್‌ಗಳನ್ನು ಮತ್ತೂಮ್ಮೆ ಬಳಕೆಗೆ ಬಾರದಂತೆ ಬ್ಲಾಕ್ ಮಾಡಲಾಗುತ್ತಿದೆ. ಈ ವರ್ಷದ ಪ್ರಕರಣಗಳಿಗೆ ಸಂಬಂಧಿಸಿದಂತೆ 15,500 ಸಿಮ್‌ಕಾರ್ಡ್ ಬ್ಲಾಕ್ ಮಾಡಲಾಗಿದೆ.
● ರವೀಂದ್ರ ಕೆ.ಗಡಾದಿ, ಕಮಾಂಡ್ ಸೆಂಟರ್ ಡಿಸಿಪಿ.
ಯಾವುದೇ ಸೈಬರ್ ಕ್ರೈಂನಲ್ಲಿ ಬಳಸಿದ ಸಿಮ್‌ಕಾರ್ಡ್ ಗಳನ್ನು ಬ್ಲಾಕ್ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದ ಪೋರ್ಟಲ್ ಮೂಲಕ ಅದನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಆ ನಂಬರ್ ಬಳಸಲು ಯಾರಿಗೂ ಸಾಧ್ಯವಿಲ್ಲ.
● ಬಿ.ದಯಾನಂದ, ನಗರ ಪೊಲೀಸ್ ಆಯುಕ್ತರು.