ಬೆಂಗಳೂರು: ದೇಶದಲ್ಲೇ ಅತೀ ಹೆಚ್ಚು ಸೈಬರ್ ಕಳ್ಳತನ ನಡೆಯುತ್ತಿರುವ ಕುಖ್ಯಾತಿ ಪಡೆದಿರುವ ಕರ್ನಾಟಕದಲ್ಲಿ 4 ವರ್ಷಗಳಲ್ಲಿ 721.26 ಕೋಟಿ ರೂ. ಸೈಬರ್ ಕಳ್ಳರ ಖಜಾನೆ ಸೇರಿರುವ ಸಂಗತಿ ಬಹಿರಂಗಗೊಂಡಿದೆ. ಆದರೆ, ಜಪ್ತಿ ಮಾಡಿರುವುದು ಕೇವಲ 97.55 ಕೋಟಿ ರೂ. ಮಾತ್ರ.!
ಕ್ಯೂಆರ್ ಕೋಡ್ ಸ್ಕ್ಯಾನ್, ಒಟಿಪಿ, ಕ್ರಿಪ್ಟೋ ಕರೆನ್ಸಿ ಹೂಡಿಕೆ, ಲಕ್ಕಿ ಡ್ರಾ, ಸಾಲ, ಸ್ಕಿಮ್ಮಿಂಗ್, ಉಡುಗೊರೆ, ಡೇಟಿಂಗ್, ಮ್ಯಾಟ್ರಿಮೊನಿ ಹೀಗೆ ಹತ್ತು ಹಲವು ಮಾರ್ಗಗಳ ಮೂಲಕ ಸೈಬರ್ ಕಳ್ಳರು ರಾಜ್ಯದ ಜನತೆಯ ದುಡ್ಡು ಲೂಟಿ ಹೊಡೆಯುವುದನ್ನು ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ 2019 ರಿಂದ 2023ರ (ಜನವರಿ)ವರೆಗೆ ಕರ್ನಾಟಕವೊಂದರಿಂದಲೇ ಬರೋಬ್ಬರಿ 721.26 ಕೋಟಿ ರೂ. ದೋಚಿದ್ದಾರೆ.
ಸುಳಿವು ಸಿಗದಂತೆ ನಕಲಿ ದಾಖಲೆ ಬಳಕೆ: ಪ್ರಮುಖವಾಗಿ ಜಾರ್ಖಂಡ್, ರಾಜಸ್ಥಾನ, ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ, ಗುಜರಾತ್‌ಗಳಲ್ಲಿ ಕುಳಿತುಕೊಂಡೇ ಸೈಬರ್ ಚೋರರು ತಮ್ಮ ಕೈ ಚಳಕ ತೋರಿಸುತ್ತಾರೆ. ಮೊದಲು ನಕಲಿ ಸಿಮ್‌ಕಾರ್ಡ, ಡಿಜಿಟಲ್ ವ್ಯಾಲೆಟ್, ಅಪರಿಚಿತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಾರೆ. ತಮ್ಮ ಬಲೆಗೆ ಬೀಳುವ ಅಮಾಯಕರಿಂದ ಈ ನಕಲಿ ಬ್ಯಾಂಕ್ ಖಾತೆಗೆ ಲಕ್ಷ-ಲಕ್ಷ ರೂ. ದುಡ್ಡು ಹಾಕಿಸಿಕೊಳ್ಳುತ್ತಾರೆ. ದುಡ್ಡು ಕ್ರೆಡಿಟ್ ಆದ ತಕ್ಷಣ ಈ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಿಕೊಳ್ಳುವುದು ಅಥವಾ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾರೆ. ಬಳಿಕ ಕೃತ್ಯಕ್ಕೆ ಬಳಸಿದ ನಕಲಿ ಸಿಮ್ ಎಸೆದು, ನಕಲಿ ಬ್ಯಾಂಕ್ ಖಾತೆ ಕ್ಲೋಸ್ ಮಾಡುತ್ತಾರೆ. ಇದರಿಂದಾಗಿ ಸೈಬರ್ ಕಳ್ಳರು ಬಳಸುವ ಮೊಬೈಲ್ ನಂಬರ್, ಕಂಪ್ಯೂಟರ್ ಐಪಿ ವಿಳಾಸ, ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸುವುದೇ ಸೈಬರ್ ಕ್ರೈಂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಆನ್‌ಲೈನ್‌ನಲ್ಲೇ ದೂರು ಸಲ್ಲಿಸಿ: ಸೈಬರ್ ಕ್ರೈಂಗಳು ಮಿತಿ ಮೀರಿ ಹೋಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರವು ಕೃತ್ಯ ನಡೆದ ಕೂಡಲೇ ದೂರು ನೀಡಲು ‘ಸೈಕಾರ್ಡ’ ಹಾಗೂ https://cybercrime.gov.in ಜಾಲತಾಣ ತೆರೆದಿದೆ. ಜಾಲತಾಣಗಳಕ್ಕೆ ಭೇಟಿ ಕೊಡುತ್ತಿದ್ದಂತೆ ಮೇಲ್ಭಾಗದಲ್ಲಿ ‘ರಿಪೋರ್ಟ್ ಸೈಬರ್ ಕ್ರೈಮ್’ ಎಂಬ ಆಯ್ಕೆ ಕ್ಲಿಕ್ ಮಾಡಬೇಕು. ಆ ವೇಳೆ ಮತ್ತೂಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಂಪ್ಲೇಂಟ್ ಫೈಲ್ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ರಾಜ್ಯ, ವಿಳಾಸ, ಹೆಸರು, ಮೊಬೈಲ್ ನಂಬರ್, ಮೇಲ್, ಎಲ್ಲವನ್ನು ನಮೂದಿಸಲು ಆಯ್ಕೆಗಳಿರುತ್ತವೆ. ಬಳಿಕ ನೀವು ವಂಚನೆಗೊಳಗಾದ ಬಗ್ಗೆ ವಿವರವಾಗಿ ನಮೂದಿಸಿ ಕೊನೆಯಲ್ಲಿ ಸಬ್ಮಿಟ್ ಮಾಡಬಹುದು. ಸಂಬಂಧಿಸಿದ ಸೈಬರ್ ಕ್ರೈಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತನಿಖೆ ನಡೆಸುತ್ತಾರೆ. ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಇಲಾಖೆಯು ಈ ಜಾಲತಾಣವನ್ನು ನಿರ್ವಹಣೆ ಮಾಡುತ್ತಿದೆ.
ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ?:
ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಅಪರಿಚಿತರ ಮಾತಿಗೆ ಮರುಳಾಗಬೇಡಿ
ಉಡುಗೊರೆ ಕಳುಹಿಸುವುದಾಗಿ ಹೇಳಿ ಕಸ್ಟಮ್ಸ್ ಅಧಿಕಾರಿಗಳ ಸೋಗಲ್ಲಿ ವಂಚಿಸುವವರಿದ್ದಾರೆ ಎಚ್ಚರ
ಆನ್‌ಲೈನ್ ಲಾಟರಿಯಂತಹ ಅನಪೇಕ್ಷಿತ ಸಂದೇಶ, ಇ-ಮೇಲ್, ಕರೆಗಳಿಗೆ ಪ್ರತಿಕ್ರಿಯಿಸಬೇಡಿ
ಅಪರಿಚಿತರು ಒಟಿಪಿ ಕೇಳಿದರೆ ಹಂಚಿಕೊಳ್ಳಬೇಡಿ
ಬ್ಯಾಂಕ್ ಖಾತೆ, ಎಟಿಎಂ, ಇ-ಮೇಲ್‌ಗಳ ಪಾಸ್ ವರ್ಡ್ ಗೌಪ್ಯವಾಗಿಡಿ
ಸೇನಾ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ಮನೆ ಬಾಡಿಗೆಗೆ ಪಡೆಯುವ ನೆಪದಲ್ಲಿ ಆನ್‌ಲೈನ್‌ನಲ್ಲೇ ವಂಚಿಸುವವರ ಮೇಲೆ ನಿಗಾ ಇರಲಿ
ಮೊಬೈಲ್‌ಗೆ ಬರುವ ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ.
ಅಪರಿಚಿತರ ಜತೆಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.
-ಬಾಬಾ, ಆಗ್ನೇಯ ವಿಭಾಗ, ಡಿಸಿಪಿ