ಬೆಂಗಳೂರು: ದಿನೇ ದಿನೆ ಹೆಚ್ಚುತ್ತಿರುವ ಸೈಬರ್ ಕ್ರೈಂ ವಂಚನೆ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ನಗರ ಪೊಲೀಸರು, 9 ತಿಂಗಳಲ್ಲಿ ದಾಖಲಾಗಿದ್ದ 12,615 ಪ್ರಕರಣಗಳಲ್ಲಿ ಕಳೆದುಕೊಂಡಿದ್ದ 470 ಕೋಟಿ ರೂ. ಪೈಕಿ 201 ಕೋಟಿ ರೂ. ಫ್ರಿಜ್ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿ, 2023ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ನಗರದ ಸೈಬರ್ ಕ್ರೈಂ ಠಾಣೆಗಳಲ್ಲಿ 12,615 ಪ್ರಕರಣಗಳು ದಾಖಲಾಗಿದ್ದು, 27.68 ಕೋಟಿ ರೂ. ಅನ್ನು ಕೋರ್ಟ್ ಅನುಮತಿ ಪಡೆದುಕೊಂಡು ದೂರುದಾರರ ಖಾತೆಗೆ ಜಮೆ ಮಾಡಲಾಗಿದೆ ಎಂದರು.
ದಾಖಲಾಗಿರುವ ಸೈಬರ್ ವಂಚನೆಗಳನ್ನು ಪರಿಶೀಲಿಸಿ ದಾಗ ಪ್ರಮುಖವಾಗಿ 18 ಮಾದರಿಯ ವಂಚನೆಗಳು ಹೆಚ್ಚಾಗಿವೆ ಎಂಬುದು ಗೊತ್ತಾಗಿದೆ. ಪ್ರಮುಖವಾಗಿ ಉದ್ಯೋಗ, ಡೆಬಿಟ್, ಕ್ರೆಡಿಟ್ ಕಾರ್ಡ್, ವ್ಯವಹಾರ ಅವಕಾಶ, ಉಡುಗೊರೆ, ಸಾಮಾಜಿಕ ಜಾಲತಾಣ, ಲೋನ್ ಆ್ಯಪ್, ಬಿಟ್‌ಕಾಯಿನ್ ಕೇಸ್, ಕಾರ್ಡ್ ಸ್ಕಿಮ್ಮಿಂಗ್, ಲೈಂಗಿಕ ಕಿರುಕುಳ ಬ್ಲ್ಯಾಕ್‌ಮೇಲ್, ಡೇಟಾ ಕಳವು, ಉಚಿತ ನೀಡುವುದಾಗಿ ವಂಚನೆ, ರಫ್ತು ಮತ್ತು ಅಮದು ವಂಚನೆ, ಮ್ಯಾಟ್ರಿಮೋನಿ ಯಲ್,ಇ-ಮೇಲ್ ಸೋಫಿಂಗ್, ಲಾಟರಿ ವಂಚನೆ, ಆನ್‌ಲೈನ್ ಗೇಮಿಂಗ್, ಸಿಮ್ ಕಾರ್ಡ್ ಕ್ಲೋನಿಂಗ್ ಮೂಲಕ ವಂಚನೆ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಉದ್ಯೋಗ, ಡೆಬಿಟ್,ಕ್ರೆಡಿಟ್ ಕಾರ್ಡ್, ವ್ಯವಹಾರ ಅವಕಾಶ, ಉಡುಗೊರೆ ವಂಚನೆ ಪ್ರಕರಣಗಳು ಸಾವಿರ ಗಡಿದಾಟಿವೆ ಎಂದರು.
ಕಾಲಮಿತಿಯಲ್ಲಿ ಸೈಬರ್ ಪ್ರಕರಣಗಳ ತನಿಖೆಗೆ ಸೂಚನೆ: ಸೈಬರ್ ಕ್ರೈಂ ಠಾಣೆಗಳು ಮಾತ್ರವಲ್ಲ, ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಲ್ಲೂ ಸೈಬರ್ ವಂಚನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೀಗಾಗಿ ಅವುಗಳ ತನಿಖಾ ಕಾಲಮಿತಿಯಲ್ಲೇ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಎಂದು ನಗರಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು. ಕಾನೂನಿನ ಪ್ರಕಾರ 90 ದಿನಗಳ ಅವಧಿಯಲ್ಲೇ ಸೈಬರ್ ವಂಚನೆ ಪ್ರಕರಣಗಳ ತನಿಖೆ ಪೂರ್ಣಗೊಳಿಸಬೇಕು. ಇದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇನ್ನು ಮುಂದೆ ಕಾಲಮಿತಿ ತನಿಖೆಯನ್ನು ಕಡ್ಡಾಯಗೊಳಿಸಿದ್ದೇವೆ. ಒಂದು ವೇಳೆ ವಿಳಂಬವಾದರೆ ಎಸಿಪಿ, ಡಿಸಿಪಿಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಇತ್ತೀಚೆಗೆ ಆಧಾರ್ ಸಂಖ್ಯೆಯಲ್ಲಿ ಬಯೋಮೆಟ್ರಿಕ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಆಧಾರ್ ವೆಬ್‌ಸೈಟ್‌ಗೆ ಹೋಗಿ ಬಯೋಮೆಟ್ರಿಕ್ ಸಂಪರ್ಕಿತ ಪಾವತಿ ವ್ಯವಸ್ಥೆ ಕಾಣದಂತೆ ಇಟ್ಟುಕೊಳ್ಳಲು ವ್ಯವಸ್ಥೆ ಇದೆ. ಅದನ್ನುಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.