Advertisement

ಬ್ಯಾಂಕ್‌ ಅಕೌಂಟ್‌ನಿಂದ ಕ್ಷಣಾರ್ಧದಲ್ಲಿ ಹಣ ಮಾಯ !

12:47 AM Mar 19, 2020 | Sriram |

ಉಡುಪಿ: ಸೈಬರ್‌ ಕಳ್ಳರ ಹಾವಳಿ ಎಲ್ಲೆಡೆ ಬೇರುಬಿಟ್ಟಿದ್ದು, ಹಲವಾರು ಮಾದರಿಗಳಲ್ಲಿ ಜನರು ವಂಚನೆಗೊಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸೈಬರ್‌ ವಂಚನೆಯ ಮೂಲಕ ಬರೋಬ್ಬರಿ 4.5 ಲಕ್ಷ ರೂ.ಗೂ ಅಧಿಕ ಹಣ ಖೋತಾ ಆಗಿದೆ. ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗೆ ಒಟ್ಟು 16 ಕೇಸುಗಳು ದಾಖಲಾಗಿದ್ದು, 16 ಲ.ರೂ. ಹಣ ವಂಚಕರ ಪಾಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ಜಾಲದಲ್ಲಿ ಇರುವವರು, ವಂಚನೆಗೊಳಗಾದವರೆಲ್ಲ ವಿದ್ಯಾವಂತರೇ!

Advertisement

ನಗದು ರಹಿತ ಹಣ ವರ್ಗಾವಣೆಯಿಂದ ಅನುಕೂಲವಿದ್ದಷ್ಟೇ ಅದರ ಅನನುಕೂಲವೂ ವಿಪರೀತ ವಾಗಿದೆ. ಇಂತಹ ಸೈಬರ್‌ ಹ್ಯಾಕರ್‌ಗಳನ್ನು ಹಿಡಿಯಲು ಪೊಲೀಸರು ಚಾಪೆಯ ಅಡಿಗೆ ತೂರಿದರೆ ಹ್ಯಾಕರ್‌ಗಳು ರಂಗೋಲಿಯಡಿ ತೂರಿ ತಮ್ಮ ಜಾಲವನ್ನು ಮತ್ತಷ್ಟು ಸಕ್ರಿಯಗೊಳಿಸುತ್ತಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಘಟನೆ -1
ಉಡುಪಿನ ಸಿತಾರಾ ಎಂಬವರು ಎಚ್‌ಬಿಐ ಲೈಫ್ ಇನ್ಶೂರೆನ್ಸ್‌ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಪತಿ ಡಿಟಿಡಿಸಿ ಕೊರಿಯರ್‌ ಮೂಲಕ ಮನೆಗೆ 3 ವಸ್ತುಗಳನ್ನು ಕಳುಹಿಸಿದ್ದು ಅದರಲ್ಲಿ ಇವರು 2 ವಸ್ತುಗಳನ್ನು ಸ್ವೀಕರಿಸಿದ್ದರು. ಇನ್ನೊಂದು ವಸ್ತು ಬಾರದೆ ಇದ್ದುದರಿಂದ ಉಡುಪಿಯ ಡಿಟಿಡಿಸಿ ಕೊರಿಯರ್‌ ಕಚೇರಿಗೆ ಕರೆ ಮಾಡಲು ಗೂಗಲ್‌ನಲ್ಲಿ ಸರ್ಚ್‌ ಮಾಡಿ 8388837158 ಸಂಖ್ಯೆಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅತ್ತ ಕಡೆಯವರು ಹಿಂದಿ ಭಾಷೆಯಲ್ಲಿ ಮಾತನಾಡಿ ನಿಮ್ಮ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಕಳುಹಿಸುವುದಾಗಿ ಅನಂತರ ನಾಲ್ಕು ಲಿಂಕ್‌ಗಳು ಬಂದಿದ್ದು, ಅದರಲ್ಲಿ 1ನ್ನು ಒತ್ತಿದಾಗ ಸೀತಾರ ಅವರ ಎಚ್‌ಡಿಎಫ್ಸಿ ಬ್ಯಾಂಕ್‌ ಉಡುಪಿ ಶಾಖೆಯ ಎಸ್‌.ಬಿ. ಖಾತೆಯಿಂದ 49,999 ರೂ. ಹಣ ಎಗರಿಸಲಾಗಿದೆ.

ಘಟನೆ -2
ಪಂಜಾಬ್‌ ಮೂಲದ ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿರುವ ಹರ್‌ಪ್ರೀತ್‌ ಕೌರ್‌ ಅವರು ಮಣಿಪಾಲ ಮಾಹೆಯ ಡಿಪಾರ್ಟ್‌ಮೆಂಟ್‌ ಆಫ್ ಕಾಮರ್ಸ್‌ನಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿದ್ದಾರೆ. ಇವರಿಗೆ ಎರಡು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಗ್ರೆಗೋರಿ ಹಂಝಾ ಎಂಬಾತನ ಪರಿಚಯ ಆಗಿತ್ತು. ಆತ ಲಂಡನ್‌ನಲ್ಲಿ ಅಥೋìಪೆಡಿಕ್‌ ಸರ್ಜನ್‌ ಎಂದು ನಂಬಿಸಿರುತ್ತಾನೆ. ಹರ್‌ಪ್ರೀತ್‌ ಕೌರ್‌ರನ್ನು ಭೇಟಿಯಾಗಲು ಭಾರತಕ್ಕೆ ಬರುವುದಾಗಿ ತಿಳಿಸುತ್ತಾರೆ.

ಮಾ. 11ರಂದು ಅಪರಿಚಿತ ಮಹಿಳೆಯೋರ್ವರು ಕರೆ ಮಾಡಿ ಗ್ರೆಗೋರಿ ಹಂಝಾ ಅವರು ಇಮಿಗ್ರೇಷನ್‌ ಚೆಕ್ಕಿಂಗ್‌ಗೆ ಒಳಪಟ್ಟಿದ್ದು, ಹೆಚ್ಚು ಬ್ಯಾಗ್‌ಗಳು ಮತ್ತು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದೇಶಿ ಕರೆನ್ಸಿ ತಂದಿದ್ದು ಅದರ ಕ್ಲಿಯರಿಂಗ್‌ಗಾಗಿ 37,500 ರೂ.ವನ್ನು ಬ್ಯಾಂಕ್‌ಗೆ ಟ್ರಾನ್ಸ್‌ಫ‌ರ್‌ ಮಾಡಲು ತಿಳಿಸಿ, ಎಸ್‌ಬಿಐ ಖಾತೆಯ ಸಂಖ್ಯೆ ನೀಡಿರುತ್ತಾರೆ. ಅನಂತರ ಪುನಃ ಕರೆ ಮಾಡಿ 78,000 ರೂ. ಮತ್ತು 2,25,000 ರೂ. ಸಹಿತ ಒಟ್ಟು 3,40,500 ರೂ. ಮೋಸದಿಂದ ಪಡೆದು ವಂಚನೆ ಮಾಡಿದ್ದಾರೆ.

Advertisement

ಘಟನೆ -3
ಮಣಿಪಾಲದ ಮೇಘಾ ಜೆ. ಪಾಂಡ್ಯ ಅವರ ಗೂಗಲ್‌ ಪೇ ಅಕೌಂಟ್‌ ಡಿಯಾಕ್ಟಿವ್‌ ಆಗಿತ್ತು. ಈ ಬಗ್ಗೆ ಅವರು ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ತಿಳಿಸಿದಾಗ ವಾಪಸು ಕರೆ ಮಾಡುವುದಾಗಿ ತಿಳಿಸಿದ್ದರು. ಅನಂತರ ಬಂದ ಕರೆಯಲ್ಲಿ ತಾನು ಪೇಟಿಎಂ ಕೆವೈಸಿ ನಂಬರ್‌ನಿಂದ ಮಾತನಾಡುವುದಾಗಿ ತಿಳಿಸಿ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ಸೂಚಿಸಿದ್ದರು. ಅದರಂತೆ ಆ್ಯಪ್‌ ಡೌನ್‌ಲೋಡ್‌ ಮಾಡಿದ್ದು ಅನಂತರ ಅವರ ಆಂಧ್ರ ಬ್ಯಾಂಕ್‌ನ ಚೆನ್ನೈ ಶಾಖೆಯ ಎಸ್‌.ಬಿ. ಖಾತೆಯಿಂದ 5 ರೂ. ಕಡಿತವಾಗಿತ್ತು. ಅನಂತರ ಎಸ್‌.ಬಿ. ಖಾತೆಯಿಂದ 3 ಬಾರಿ ಕ್ರಮವಾಗಿ 24,990, 25,000, 1,901 ಸಹಿತ ಒಟ್ಟು 51,891 ರೂ. ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿ ವಂಚಿಸಲಾಗಿದೆ.

ಕ್ಯೂಆರ್‌ಕೋಡ್‌ ಮೂಲಕವೂ ವಂಚನೆ
ಆನ್‌ಲೈನ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಸೇವೆಯಲ್ಲಿ ಗ್ರಾಹಕರು ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ನೀಡಿ ಲಾಗಿನ್‌ ಆದ ಅನಂತರ ಒನ್‌ಟೈಮ್‌ ಪಾಸ್‌ವರ್ಡ್‌ ನಮೂದಿಸಿದರೆ ಹಣ ವರ್ಗಾವಣೆ ಆಗುತ್ತಿತ್ತು. ಆದರೆ ಈಗ ಒಟಿಪಿ ಬದಲಿಗೆ ಕ್ಯೂಆರ್‌ ಕೋಡ್‌ ಬಳಸಲಾಗುತ್ತಿದೆ. ಆದರೆ ಈ ಸೇವೆ ಬಗ್ಗೆ ನಾಗರಿಕರಿಗೆ ಇನ್ನೂ ತಿಳಿವಳಿಕೆ ಮೂಡದಿರುವುದು ಮಾತ್ರ ವಿಪರ್ಯಾಸವಾಗಿದೆ.

ವಿವಿಧ ಮಾರ್ಗಗಳ ಮೂಲಕ ಖಾತೆಗೆ ಕನ್ನ
ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ವಾಲೆಟ್‌, ಪ್ರಿಪೇಯ್ಡ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಹೀಗೆ ಬ್ಯಾಂಕಿಂಗ್‌ ಸ್ವರೂಪ ಬದಲಾಗುತ್ತಲೇ ಇದೆ. ಇಂದು ಆನ್‌ಲೈನ್‌ನಲ್ಲೇ ಎಲ್ಲ ರೀತಿಯ ವ್ಯವಹಾರಗಳು ನಡೆಯುತ್ತಿರುವಾಗ ವಂಚಕರು ಗ್ರಾಹಕರ ಮಾಹಿತಿಯನ್ನು ಕದಿಯಲು ವಿವಿಧ ಮಾರ್ಗಗಳನ್ನು ಕಂಡುಕೊಂಡು ಯಶಸ್ವಿಯಾಗುತ್ತಿದ್ದಾರೆ. ಬಹುತೇಕ ಮಂದಿ ವಿದ್ಯಾವಂತರೇ ಇದರಲ್ಲಿ ಮೋಸ ಹೋಗುತ್ತಿದ್ದು ದೂರು ನೀಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಪತ್ತೆ ಕಾರ್ಯ ನಡೆಯುತ್ತಿದೆ
ಸೈಬರ್‌ ಕ್ರೈಂ ಅಪರಾಧಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ನೀಡುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಈ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಅನಗತ್ಯ ಕರೆಗಳು, ಎಸ್‌ಎಂಎಸ್‌ಗಳಿಂದ ದೂರವಿದ್ದರೆ ಉತ್ತಮ. ಈಗಾಗಲೇ ದಾಖಲಾಗಿರುವ ಅಪರಾಧಗಳು ತನಿಖಾ ಹಂತದಲ್ಲಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
-ಎನ್‌.ವಿಷ್ಣುವರ್ಧನ್‌,
ಪೊಲೀಸ್‌ ವರಿಷ್ಠಾಧಿಕಾರಿಗಳು, ಉಡುಪಿ

ಜಾಗರೂಕತೆ ಇದ್ದರೆ ಉತ್ತಮ
ಪ್ರತಿಯೊಂದಕ್ಕೂ ಇಂದು ಆನ್‌ಲೈನ್‌ ಮೂಲಕವೇ ಹಣ ಪಾವತಿ ಮಾಡುವುದರಿಂದ ಗ್ರಾಹಕರಿಗೆ ಅರಿವಿಲ್ಲದಂತೆ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಸಾಕಷ್ಟು ಎಚ್ಚರದಿಂದ ಇರುವುದು ಒಳ್ಳೆಯದು. ವಿದೇಶಗಳಿಂದ, ಹೊರರಾಜ್ಯ, ಜಿಲ್ಲೆಗಳ ಸೈಬರ್‌ ಕ್ರೈಂ ವಂಚಕರು ವಿವಿಧ ಮೊಬೈಲ್‌ ಸಂಖ್ಯೆಗಳನ್ನು ಬಳಸಿ ಇಂತಹ ಕೃತ್ಯ ಎಸಗುತ್ತಾರೆ. ಈ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.
-ಸೀತಾರಾಮ್‌
ಇನ್‌ಸ್ಪೆಕ್ಟರ್‌, ಸೆನ್‌ಪೊಲೀಸ್‌ ಠಾಣೆ ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next