Advertisement

ಪೈವಳಿಕೆ ಯುವತಿ ಕೊಲೆ: ಸೈನೈಡ್‌ ಮೋಹನ್‌ ತಪ್ಪಿತಸ್ಥ

09:21 AM Jul 13, 2019 | keerthan |

ಮಂಗಳೂರು: ಸೈನೈಡ್‌ ಮೋಹನ್‌ ಮೇಲಿರುವ ಯುವತಿಯರ ಸರಣಿ ಕೊಲೆ ಆರೋಪಗಳ ಪೈಕಿ, ಕಾಸರಗೋಡು ಜಿಲ್ಲೆ ಪೈವಳಿಕೆಯ ಅವಿವಾಹಿತ ಯುವತಿ ಕೊಲೆ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಜುಲೈ 18ರಂದು ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ನಡೆಯಲಿದೆ.

Advertisement

ಸಾಬೀತಾದ ಆರೋಪ
ಮೋಹನ್‌ ಮೇಲಿನ ಐಪಿಸಿ ಸೆಕ್ಷನ್‌ 302 (ಕೊಲೆ), ಸೆಕ್ಷನ್‌ 328 (ವಿಷ ಉಣಿಸಿದ್ದು), ಸೆಕ್ಷನ್‌ 201 (ಸಾಕ್ಷ್ಯನಾಶ), ಸೆಕ್ಷನ್‌ 392 (ಚಿನ್ನಾಭರಣ ಸುಲಿಗೆ) ಸೆಕ್ಷನ್‌ 417 (ವಂಚನೆ) ಎಸಗಿರುವುದು ಸಾಬೀತಾ ಗಿದೆ ಎಂದು ನ್ಯಾಯಾಧೀಶರಾದ ಸೈಯಿದುನ್ನಿಸ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ
ಪೈವಳಿಕೆಯ 26 ವರ್ಷದ ಅವಿವಾಹಿತ ಯುವತಿಯನ್ನು ವಿಮಾ ಕಂಪೆನಿಯ ಉದ್ಯೋಗಿ ಸುಧಾಕರ ಎಂದು ಪರಿಚಯಿಸಿಕೊಂಡು ಆರೋಪಿ ಮೋಹನ್‌ ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯನ್ನು ಚಿನ್ನಾಭರಣ ಧರಿಸಿ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ಗೆ ಬರಲು ಹೇಳಿದ್ದ. ಅದರಂತೆ ಆಕೆ ಅತ್ತೆ ಪರಮೇಶ್ವರಿ ಜತೆ 2006 ಮಾ. 20ರಂದು ಸ್ಟೇಟ್‌ಬ್ಯಾಂಕ್‌ಗೆ ಬಂದಿದ್ದರು. ಮಧ್ಯಾಹ್ನ ಅಲ್ಲಿನ ಹೊಟೇಲಿನಲ್ಲಿ ಮೂರು ಮಂದಿ ಜತೆಯಾಗಿ ಊಟ ಮಾಡಿದ್ದರು.

ಬಳಿಕ ಅತ್ತೆಯನ್ನು ಅವರ ಮನೆಗೆ ಕಳುಹಿಸಿ ಯುವತಿ ಮತ್ತು ಮೋಹನ್‌ ಮಡಿಕೇರಿಗೆ ತೆರಳಿದ್ದರು. ಅಲ್ಲಿನ ಲಾಡಿjನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಆಕೆಯ ಚಿನ್ನಾಭರಣ ತೆಗೆದಿಟ್ಟು ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್‌ ನೀಡಿದ್ದ. ಮಹಿಳೆಯರ ಶೌಚಾಲಯಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಕುಸಿದು ಸಾವನ್ನಪ್ಪಿದ್ದರು. ಬಳಿಕ ಆತ ಆಕೆಯ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಎಂದು ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದುವೆಯಾಗಿ ಸುಖವಾಗಿರಬಹುದೆಂದು ನಂಬಿದ್ದ ಆಕೆಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ. ಸೈನೈಡ್‌ ಮೋಹನ್‌ 2009 ಅ. 21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ವಿಚಾರಣೆ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಬಳಿಕ ಮಂಜೇಶ್ವರ ಪೊಲೀಸ್‌ ಠಾಣೆಗೆ ಆತನನ್ನು ಕರೆದೊಯ್ದಿದ್ದರು. ಅಲ್ಲಿ ಯುವತಿಯ ಅತ್ತೆ ಪರಮೇಶ್ವರಿ ಆರೋಪಿಯನ್ನು ಗುರುತಿಸಿದ್ದರು.

Advertisement

ಈ ಪ್ರಕರಣದಲ್ಲಿ 41 ಸಾಕ್ಷಿದಾರರು, 50 ದಾಖಲೆ ಗಳು ಹಾಗೂ 42 ಸಾಂದರ್ಭಿಕ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಯುವತಿಯ ಚಿನ್ನಾಭರವಣವನ್ನು ಖರೀದಿಸಿದವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು. ಅಪಹರಣ ಮತ್ತು ಅತ್ಯಾಚಾರ ಸಾಬೀತಾಗಿಲ್ಲ. ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ಅವರು ವಾದಿಸಿದ್ದರು.

ಮೋಹನನ ಬಲೆಗೆ ಬಿದ್ದಿದ್ದ ಇಬ್ಬರು ಮಹಿಳೆಯರು ಬದುಕುಳಿದಿದ್ದಾರೆ. ಪ್ರತಿ ಪ್ರಕರಣಗಳಿಗೂ ಅವರನ್ನು ಸಾಕ್ಷಿದಾರರನ್ನಾಗಿ ಮಾಡ‌ಲಾಗಿದೆ. ವೈದ್ಯರ ಹೇಳಿಕೆ, ಲಾಡ್ಜ್ನವರ ಹೇಳಿಕೆಗಳು, ಕರೆ ಮಾಡಿದ ವಿವರ ಆರೋಪ ಸಾಬೀತಾಗಲು ಪ್ರಮುಖ ಕಾರಣಗಳಾಗಿವೆ.  ಮೋಹನ್‌ ಮೇಲೆ ಸುಮಾರು 20 ಯುವತಿಯರ ಕೊಲೆ ಆರೋಪ ಇದ್ದು, ಇನ್ನು 5 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ವೀಡಿಯೋ ಕಾನ್ಫರೆನ್ಸ್‌
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮೋಹನ ಕುಮಾರ್‌ನನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ತಾನು ಯಾವುದೇ ತಪ್ಪು ಎಸಗಿಲ್ಲ ಎಂದು ಆತ ಹೇಳಿದ್ದಾನೆ. ಸರಕಾರದ ಪರವಾಗಿ ವಕೀಲರನ್ನು ನೇಮಿಸಿಕೊಳ್ಳುವಂತೆ ನ್ಯಾಯಾಧೀಶರು ಮೋಹನ ಕುಮಾರ್‌ಗೆ ಸೂಚಿಸಿದ್ದರು. ಅದಕ್ಕೆ ನಿರಾಕರಿಸಿದ್ದ ಆತ ತಾನೇ ಸ್ವಯಂ ವಾದಿಸುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next