Advertisement

ಸೈನೆಡ್‌ ವಿಷಪೂರಿತ ಧೂಳಿಗೆ ಲಕ್ಷ ಸಸಿಗಳ ಬೇಲಿ

06:15 AM Jun 20, 2018 | |

ಕೋಲಾರ: ಕೆಜಿಎಫ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ್‌ ಅವರು ಸೈನೆಡ್‌ ಮಿಶ್ರಿತ ಧೂಳಿಗೆ ಲಕ್ಷ ಸಸಿಗಳ ಬೇಲಿ ಹಾಕಿ, ಜನರ ಆರೋಗ್ಯಕಾಪಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

Advertisement

ಕೆಜಿಎಫ್ ಚಿನ್ನದ ಗಣಿಗಳಿಂದ ಲಕ್ಷಾಂತರ ಟನ್‌ ಚಿನ್ನದ ಅದಿರನ್ನು ಸಂಸ್ಕರಿಸಿದ ನಂತರ, ಉಳಿದ ತ್ಯಾಜ್ಯವನ್ನು ಕೆಜಿಎಫ್ ಸುತ್ತಲೂ ಗುಡ್ಡಗಳ ರೀತಿಯಲ್ಲಿ ರಾಶಿ ಹಾಕಲಾಗಿದೆ. ಇಡೀ ಕೆಜಿಎಫ್ ನಗರವನ್ನು ಈ ಗುಡ್ಡ ಆವರಿಸಿದೆ. ಈ ಗುಡ್ಡಗಳ ಮೇಲೆ ಬೀಸುವ ಗಾಳಿ ಸೈನೆಡ್‌ ಧೂಳಿನ ಜೊತೆ ಸೇರಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿತ್ತು. ಗಾಳಿಯ ಕಾಲ ಆರಂಭವಾಯಿತೆಂದರೆ ಕೆಜಿಎಫ್ನ ಜನ ಬೆಚ್ಚಿ ಬೀಳುತ್ತಿದ್ದರು. ಸೈನೆಡ್‌ ಮಿಶ್ರಿತ ಧೂಳನ್ನು ಉಸಿರಾಡುವ ಮೂಲಕ ಸಿಲಿಕಾಸಿಸ್‌ ಎಂಬ ಅಪಾಯಕಾರಿ ರೋಗದಿಂದ ನರಳುತ್ತಿದ್ದರು. ಉಸಿರಾಟದ ತೊಂದರೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಮಾಮೂಲಿ ಎನ್ನುವಂತಾಗಿತ್ತು. ಈ ಕಾಯಿಲೆಗಳಿಂದ ಪ್ರಾಣ ಬಿಟ್ಟವರು ಅದೆಷ್ಟೋ ಮಂದಿ.

ಇನ್ನು, ಮಳೆಗಾಲದಲ್ಲಿ ಸೈನೆಡ್‌ಗುಡ್ಡಗಳ ಮೇಲಿನಿಂದ ಹರಿಯುತ್ತಿದ್ದ ನೀರು ವಿಷಪೂರಿತವಾಗಿ ಅಕ್ಕಪಕ್ಕದ ಕೆರೆಗಳನ್ನು ಸೇರುತ್ತಿತ್ತು. ಇದೇ ಕಲುಷಿತ ನೀರನ್ನು ಜನ ಜಾನುವಾರುಗಳು ಅನಿವಾರ್ಯವಾಗಿ ಬಳಸಬೇಕಾಗಿತ್ತು.
ಕೃಷಿ, ತೋಟಗಾರಿಕೆ ಚಟುವಟಿಕೆ ಗಳಿಗೂ ರೈತರು ಇದೇ ನೀರನ್ನು ಬಳಸಬೇಕಾಗಿತ್ತು. ಚೆನ್ನೈನ ಕರಾವಳಿ ತೀರದ ದೀಪಸ್ತಂಭದ ಮೇಲೂ ಕೆಜಿ ಎಫ್ನ ಸೈನೆಡ್‌ ಧೂಳಿನ ಅಂಶಗಳು ಪತ್ತೆಯಾಗಿದ್ದವು.

ನ್ಯಾಯಾಧೀಶರ ಪರಿಸರ ಪ್ರೇಮ: ಸರ್ಕಾರದಿಂದ ಗಾಳಿ ಬೀಸುವ ಕಾಲದಲ್ಲಿ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸಿ, ಲಕ್ಷಾಂತರ ರೂ. ವೆಚ್ಚ ಮಾಡಿ ಕೈತೊಳೆದು ಕೊಳ್ಳಲಾಗುತ್ತಿತ್ತು. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ. 2 ವರ್ಷಗಳ ಹಿಂದೆ ಕೆಜಿಎಫ್ಗೆ ನ್ಯಾಯಾಧೀಶರಾಗಿ ಆಗಮಿಸಿದ ಜಗದೀಶ್ವರ್‌ ಕುಟುಂಬಕ್ಕೂ ಸೈನೆಡ್‌ ಗುಡ್ಡದ ಧೂಳಿನ ಸಮಸ್ಯೆಯ ಅರಿವಾಗತೊಡಗಿತು. ಇದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕೆಂಬ ಕುಟುಂಬದವರ ಒತ್ತಾಯ ಹಾಗೂ ನ್ಯಾಯಾಧೀಶರ ಪರಿಸರ ಪ್ರೇಮ, ಸೈನೆಡ್‌ ಗುಡ್ಡದ ಮೇಲೆ ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ
ಚಾಲನೆ ಸಿಗುವಂತಾಯಿತು.

ಇದಕ್ಕೆ ಸರಕಾರದ ವಿಶೇಷ ನೆರವನ್ನು ನ್ಯಾಯಾಧೀಶರು ಬಯಸಲಿಲ್ಲ. ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯಕ್ರಮವನ್ನೇ ಈ ಯೋಜನೆಗೆ ಬಳಕೆ ಮಾಡಿಕೊಳ್ಳಲಾಯಿತು. ಅರಣ್ಯ ಇಲಾಖೆ, ನಗರಸಭೆ, ಕೆಜಿಎಫ್ ನಗರದ ವಿವಿಧ ಸಂಘ ಸಂಸ್ಥೆಗಳು ಸಸಿ ನೆಡುವ ಕಾರ್ಯಕ್ರಮಕ್ಕೆ ಕೈ ಜೋಡಿಸಿದವು.

Advertisement

ವರ್ಷದ ಹಿಂದೆ ನ್ಯಾ.ಜಗದೀಶ್ವರ್‌ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಆರಂಭವಾಯಿತು. ಅರಣ್ಯಾಧಿಕಾರಿ ಶ್ರೀನಿವಾಸ್‌ ಅವರು ಸಸಿಗಳನ್ನು ಒದಗಿಸಲು ಒಪ್ಪಿಗೆ ನೀಡಿದರು. ಶ್ರಮದಾನಕ್ಕೆ ಕೆಜಿಎಫ್ ನಾಗರಿಕರು ಕೈಜೋಡಿಸಿದರು.

ಸುಮಾರು 100 ಎಕರೆ ವಿಸ್ತಾರವಾಗಿರುವ ಸೈನೆಡ್‌ ಗುಡ್ಡಗಳ ಮೇಲೆ 40 ಸಾವಿರ ಕತ್ತಾಳೆ, 40 ಸಾವಿರ ಹೊಂಗೆ, ಸುಮಾರು 20 ಸಾವಿರದಷ್ಟು ಹುಲ್ಲು ಬಿಡುವ ಬೀಜಗಳನ್ನು ನೆಡಲಾಯಿತು. ಸಸಿಗಳನ್ನು ನೆಡುವ ಕಾರ್ಯ ಆರಂಭವಾದ ಮೊದಲ ದಿನದ ಸಂಜೆಯೇ ಮಳೆ ಸುರಿಯುವ ಮೂಲಕ ಸಸಿಗಳಿಗೆ ಜೀವಕಳೆ ಬರುವಂತಾಗಿತ್ತು. ಸುಮಾರು 3 ತಿಂಗಳ ಕಾಲ ಸಸಿಗಳನ್ನು ನೆಡುವ ಜೊತೆಯಲ್ಲಿಯೇ ಮಳೆ ಸುರಿದು ಸಸಿಗಳು ಬೇರು ಬಿಡಲು ಸಹಕರಿಸಿತು.ಹೀಗೆ ನೆಡಲಾದ ಶೇ.90ಕ್ಕೂ ಹೆಚ್ಚು ಸಸಿಗಳು ನಳನಳಿಸುತ್ತಾ ಬೆಳೆಯುತ್ತಿವೆ. 

ಹಲವಾರು ವರ್ಷಗಳಿಂದ ಕೆಜಿಎಫ್ ನಗರವನ್ನು ಕಾಡುತ್ತಿದ್ದ ಧೂಳಿನ ಸಮಸ್ಯೆಗೆ ಕಿಂಚಿತ್ತಾದರೂ ಪರಿಹಾರ
ದೊರಕಿಸಿಕೊಟ್ಟ ನೆಮ್ಮದಿ ನನಗೆ ಸಿಕ್ಕಿದೆ.
– ಜಗದೀಶ್ವರ್‌, ನ್ಯಾಯಾಧೀಶರು,
ಕೆಜಿಎಫ್ ನ್ಯಾಯಾಲಯ.

ಕೆಜಿಎಫ್ ಜನರನ್ನು ಮಾರಣಾಂತಿಕವಾಗಿ ಕಾಡುತ್ತಿದ್ದ ಸೈನೆಡ್‌ ಧೂಳಿನ ಸಮಸ್ಯೆಗೆ ನ್ಯಾಯಾಧೀಶರಿಂದಾಗಿ ಶಾಶ್ವತ
ಪರಿಹಾರ ಒದಗಿಸಲು ಸಾಧ್ಯವಾಗಿದೆ. ಧೂಳಿನ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
– ಶ್ರೀಕಾಂತ್‌,
ಪೌರಾಯುಕ್ತರು, ನಗರಸಭೆ, ಕೆಜಿಎಫ್

Advertisement

Udayavani is now on Telegram. Click here to join our channel and stay updated with the latest news.

Next