ಮಣಿಪಾಲ:ಐದನೇ ಬಾರಿ ಭಾರವನ್ನು ಮೇಲಕ್ಕೆತ್ತುತ್ತಿದ್ದಂತೆಯೇ ಭಾರತದ ಜನರ ನಿರೀಕ್ಷೆ ಮೇರೆ ಮೀರಿತು. ಪದಕ ಘೋಷಣೆ ಆಗುತ್ತಿದ್ದಂತೆಯೇ ದೇಶದ ಹೆಸರು ಗುರುರಾಜ್‌ರಿಂದಾಗಿ ಪ್ರಜ್ವಲಿಸು ವಂತಾಯಿತು. ಭಾರತ ಪದಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವಂತಾಯಿತು ಎಂದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಹೇಳಿದರು.
ಅವರು ಬುಧವಾರ “ಉದಯವಾಣಿ’ ಕಚೇರಿಯಲ್ಲಿ ಕಾಮನ್ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಗುರುರಾಜ್ ಪೂಜಾರಿ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಮಾತನಾಡಿದರು.
ಸಮಸ್ತ ಭಾರತೀಯರ ಆಶೀರ್ವಾದ ಗುರುರಾಜ್ ಮೇಲಿತ್ತು. ಪದಕದಿಂದಾಗಿ ಕರಾವಳಿ ಕರ್ನಾಟಕ, ಕುಂದಾಪುರದ ಹೆಸರು ಜಾಜ್ವಲ್ಯಮಾನವಾಯಿತು. ಅನಾರೋಗ್ಯದಿಂದಿದ್ದರೂ ಕೊನೆಕ್ಷಣದಲ್ಲಿ ಸಾಧನೆ ಮಾಡಲು ಶಕ್ತಿಯನ್ನು ಭಗವಂತನೇ ಕರುಣಿಸಿದ. ನಿಮ್ಮ ಆತ್ಮಬಲ, ಪರಿಶ್ರಮ, ಬದ್ಧತೆ ಪ್ರಶ್ನಾತೀತ. ಅದಕ್ಕಾಗಿ ನಮಗೆಲ್ಲ ಹೆಮ್ಮೆ ಎನಿಸುತ್ತದೆ. ಯುವಕರಿಗೆ ಸ್ಫೂರ್ತಿಯಾದಿರಿ. ಪದಕ ಗೆದ್ದ ನಿಮಗೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ಬಾರಿ ಚಿನ್ನದ ಪದಕವೇ ದೊರೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಒಬ್ಬ ಕ್ರೀಡಾಪಟುವಿಗೆ ನೀಡಬೇಕಾದ ಮಾನ್ಯತೆ, ಪ್ರಾಶಸ್ತ್ಯವನ್ನು “ಉದಯವಾಣಿ’ ಸದಾ ನೀಡುತ್ತದೆ. ನಿಮಗೂ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬೆಂಬಲದ ಅವಶ್ಯವಿದ್ದರೆ ಪತ್ರಿಕೆ ಖಂಡಿತವಾಗಿಯೂ ನೀಡುತ್ತದೆ ಎಂದರು.
ಸಮ್ಮಾನಕ್ಕೆ ಉತ್ತರಿಸಿದ ಗುರುರಾಜ್, ಎಲ್ಲೇ ಸಮ್ಮಾನ, ಅಭಿನಂದನೆ ನಡೆದರೂ ಹುಟ್ಟೂರಲ್ಲಿ ಸಮ್ಮಾನ ಪಡೆಯಲು ವಿಶೇಷ ಅಭಿಮಾನವಾಗುತ್ತದೆ. ಪತ್ರಿಕೋದ್ಯಮ ವ್ಯಾಸಂಗ ಮಾಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ನನ್ನನ್ನು ಗುರುತಿಸಿ, ಬೆಂಬಲಿಸಿ, ಪ್ರೋತ್ಸಾಹಿಸಿದ “ಉದಯವಾಣಿ’ಗೆ ಧನ್ಯವಾದಗಳು ಎಂದರು.
ಬಳಿಕ ಗುರುರಾಜ್ ಅವರೊಂದಿಗೆ ಫೇಸ್‌ಬುಕ್ ಲೈವ್ ಕಾರ್ಯಕ್ರಮ ನಡೆಯಿತು. ಅವರ ತಂದೆ ಮಹಾಬಲ ಪೂಜಾರಿ, ಪತ್ನಿ ಸೌಜನ್ಯಾ, ಸಹೋದರರಾದ ಮನೋಹರ್, ಉದಯ್ ಉಪಸ್ಥಿತರಿದ್ದರು.
ಚಿನ್ನವೇ ಸಿಗಲಿ
“ಮುಂಬರುವ ಜಾಗತಿಕ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕವೇ ದೊರೆಯುವಂತಾಗಲಿ. ಈ ಬಾರಿ ಅನಾರೋಗ್ಯದಿಂದಾಗಿ ಕೊನೆಯ ಕ್ಷಣದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಡುವಂತಾದರೂ ಮುಂದಿನ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕವೇ ಕೊರಳನ್ನು ಅಲಂಕರಿಸುವಂತಾಗಲಿ. ಇದು ನಮ್ಮೆಲ್ಲರ ಹಾಗೂ ದೇಶದ ಕೋಟ್ಯಂತರ ಮಂದಿಯ ಹಾರೈಕೆಯೂ ಹೌದು.
– ವಿನೋದ್ ಕುಮಾರ್
ಎಂಡಿ ಮತ್ತು ಸಿಇಒ, ಎಂಎಂಎನ್‌ಎಲ್