ಬರ್ಮಿಂಗ್‌ಹ್ಯಾಮ್: ಅಪರೂಪದ ಕ್ರೀಡೆಯಾದ ಲಾನ್ ಬೌಲ್ಸ್‌ನಲ್ಲಿ ಭಾರತದ ವನಿತಾ ತಂಡ ಐತಿಹಾಸಿಕ ಪದಕವೊಂದನ್ನು ಗೆಲ್ಲುವ ಹಂತ ತಲುಪಿದೆ. ಸೋಮವಾರದ “ಫೋರ್’ ಫಾರ್ಮೇಟ್‌ನಲ್ಲಿ ನ್ಯೂಜಿಲ್ಯಾಂಡನ್ನು 16-13 ಅಂತರದಿಂದ ಕೆಡವಿದ ಭಾರತ ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿತು.
ಲವ್ಲಿ ಚೌಬೆ, ಪಿಂಕಿ, ನಯನ್ಮೋನಿ ಸೈಕಿಯ ಮತ್ತು ರೂಪಾರಾಣಿ ಟಿರ್ಕಿ ಅವರನ್ನೊಳಗೊಂಡ ತಂಡ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಮಂಗಳವಾರದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಗೆದ್ದರೆ ಚಿನ್ನ ಒಲಿಯಲಿದೆ. ಇಲ್ಲವಾದರೆ ಬೆಳ್ಳಿಯಂತೂ ಖಾತ್ರಿ. ನ್ಯೂಜಿಲ್ಯಾಂಡಿಗೆ ಆರಂಭದಲ್ಲೇ 0-5 ಮುನ್ನಡೆ ಬಿಟ್ಟುಕೊಟ್ಟ ಭಾರತ, ಬಳಿಕ ಬಲಿಷ್ಠವಾಗಿ ಮರಳಿತು.
“ಎಂಡ್-9′ ಬಳಿಕ ಎರಡೂ ತಂಡಗಳು 7-7 ಸಮಬಲದಲ್ಲಿದ್ದವು. “ಎಂಡ್-10′ ಬಳಿಕ ಭಾರತ 10-7 ಅಂತರದ ಭರ್ಜರಿ ಮುನ್ನಡೆ ಸಾಧಿಸಿತು. ಎಂಡ್-14 ವೇಳೆ ಪೈಪೋಟಿ ತೀವ್ರಗೊಂಡಿತು. ನ್ಯೂಜಿಲ್ಯಾಂಡ್ 13-12ರ ಅಲ್ಪ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಅದೃಷ್ಟ ಭಾರತದ ಕಡೆಗಿತ್ತು.
“ಎಂಡ್-16′ ಬಳಿಕ 16-13 ಲೀಡ್ ಗಳಿಸುವ ಮೂಲಕ ಭಾರತ ಗೆಲುವು ಸಾಧಿಸಿತು. ರೂಪಾರಾಣಿ ಅವರ ಅಮೋಘ ಶಾಟ್ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಇದಕ್ಕೂ ಮುನ್ನ ಭಾರತದ ಪುರುಷರ ತಂಡ ಉತ್ತರ ಐರ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿತ್ತು.