Advertisement

ವನಿತೆಯರ 50 ಮೀ. ರೈಫ‌ಲ್‌ ಪ್ರೋನ್‌ನಲ್ಲಿ ಬೆಳ್ಳಿ ಪದಕ

06:55 AM Apr 13, 2018 | Team Udayavani |

ಗೋಲ್ಡ್‌ಕೋಸ್ಟ್‌: ಭಾರತದ ಅನುಭವಿ ಶೂಟರ್‌ ತೇಜಸ್ವಿನಿ ಸಾವಂತ್‌ ಕಾಮನ್ವೆಲ್ತ್‌ ಗೇಮ್ಸ್‌ ವನಿತಾ 50 ಮೀ. ರೈಫ‌ಲ್‌ ಪ್ರೋನ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕದ ಸಾಧನೆಗೈದಿದ್ದಾರೆ. ಆದರೆ ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಯುವ ಶೂಟರ್‌ ಅಂಜುಮ್‌ ಮೌದ್ಗಿಲ್‌ 16ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

Advertisement

ತೇಜಸ್ವಿನಿ ಸಾವಂತ್‌ 6 ಸುತ್ತುಗಳಲ್ಲಿ ಕ್ರಮವಾಗಿ 102.1, 102.4, 103.3, 102.8, 103.7, 104.6 ಅಂಕಗಳೊಂದಿಗೆ ಒಟ್ಟು 618.9 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾದರು. ಅಂಜುಮ್‌ ಗಳಿಕೆ 602.2 ಅಂಕ.

ಒಟ್ಟು 621.0 ಅಂಕ ಸಂಪಾದಿಸಿ ನೂತನ ಗೇಮ್ಸ್‌ ದಾಖಲೆ ಸ್ಥಾಪಿಸುವ ಮೂಲಕ ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೊ ಚಿನ್ನದ ಪದಕ ಗೆದ್ದರೆ, ಸ್ಕಾಟ್ಲೆಂಡಿನ ಸಿಯೋನೇಡ್‌ ಮೆಕಿಂತೋಷ್‌ ಕಂಚಿನ ಪದಕ ಜಯಿಸಿದರು (618.1).
ಮಾಜಿ ವಿಶ್ವ ಚಾಂಪಿಯನ್‌ ಆಗಿರುವ, ಕೊಲ್ಹಾಪುರ ಮೂಲದ 37ರ ಹರೆಯದ ತೇಜಸ್ವಿನಿ ಸಾವಂತ್‌ 4 ಸುತ್ತುಗಳ ಬಳಿಕ ದ್ವಿತೀಯ ಸ್ಥಾನಕ್ಕೇರಿ ಬಂದರು. ಆಗಲೇ ಅಂಜುಮ್‌ ಪದಕ ಸುತ್ತಿನಿಂದ ಹೊರಬಿದ್ದಾಗಿತ್ತು. 5ನೇ ಸುತ್ತಿನ ಬಳಿಕವೂ ದ್ವಿತೀಯ ಸ್ಥಾನ ಕಾಯ್ದುಕೊಂಡ ತೇಜಸ್ವಿನಿ ಭಾರತಕ್ಕೆ ಮತ್ತೂಂದು ಶೂಟಿಂಗ್‌ ಪದಕವನ್ನು ಖಚಿತಪಡಿಸಿದರು. 6ನೇ ಹಾಗೂ ಅಂತಿಮ ಸುತ್ತಿನಲ್ಲಿ 104.6 ಅಂಕ ಗಳಿಸಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು.

3ನೇ ಗೇಮ್ಸ್‌, 6ನೇ ಪದಕ
ಇದು 3ನೇ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ತೇಜಸ್ವಿನಿ ಸಾವಂತ್‌ ಗೆದ್ದ 6ನೇ ಪದಕ ಎಂಬುದು ವಿಶೇಷ. 2010ರ ಹೊಸದಿಲ್ಲಿ ಗೇಮ್ಸ್‌ನಲ್ಲಿ ತೇಜಸ್ವಿನಿ ಅಮೋಘ ಸಾಧನೆ ಮೂಲಕ ಸಂಚಲನ ಮೂಡಿಸಿದ್ದರು. ಅಂದು 10 ಮೀ. ಏರ್‌ ರೈಫ‌ಲ್‌ ಸಿಂಗಲ್ಸ್‌ನಲ್ಲಿ ಹಾಗೂ ಅವನೀತ್‌ ಕೌರ್‌ ಸಿಧು ಜತೆ ಡಬಲ್ಸ್‌ ಸ್ಪರ್ಧೆಗಳೆರಡರಲ್ಲೂ ಬಂಗಾರಕ್ಕೆ ಗುರಿ ಇರಿಸಿದ್ದರು. 50 ಮೀ. ರೈಫ‌ಲ್‌ ಪ್ರೋನ್‌ ಸಿಂಗಲ್ಸ್‌ನಲ್ಲಿ ಬೆಳ್ಳಿ ಹಾಗೂ ಡಬಲ್ಸ್‌ನಲ್ಲಿ ಮೀನಾ ಕುಮಾರಿ ಜತೆಗೂಡಿ ಕಂಚಿನ ಪದಕವನ್ನೂ ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರಥಮ ವನಿತಾ ಶೂಟರ್‌ ಎಂಬ ಹಿರಿಮೆಯೂ ತೇಜಸ್ವಿನಿ ಸಾವಂತ್‌ ಪಾಲಿಗಿದೆ (2010).

“ಇಂದಿನ ಸ್ಪರ್ಧೆಯ ವೇಳೆ ಗಾಳಿ ಬೀಸುತ್ತಿದ್ದರೂ ಭಾರೀ ಕಷ್ಟವೇನೂ ಎದುರಾಗಲಿಲ್ಲ’ ಎಂದು ಸಾವಂತ್‌ ಪ್ರತಿಕ್ರಿಯಿಸಿದರು.

Advertisement

“ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ. ಆದರೆ ಇದಕ್ಕೂ ಮೊದಲು ಇದೇ ವರ್ಷದ ಏಶ್ಯಾಡ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿದೆ’ ಎಂದು ತಮ್ಮ ಭವಿಷ್ಯದ ಬಗ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next