ಹೊಸದಿಲ್ಲಿ : ಇಂದಿಲ್ಲಿ ನಡೆದ ನಿರ್ಣಾಯಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿತು.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಂಡಿರುವ ಹೀನಾಯ ಸೋಲಿನ ಹೊಣೆಯನ್ನು ತಾನು ಸಂಪೂರ್ಣ ವಹಿಸುವುದಾಗಿ ಹೇಳಿ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಕೊಡುಗೆಯನ್ನು ರಾಹುಲ್ ಗಾಂಧಿ ಸಿಡಬ್ಲ್ಯುಸಿ ಸಭೆಯಲ್ಲಿ ನೀಡಿದ್ದರು.
ಆದರೆ ಪಕ್ಷದ ಸೋಲಿಗೆ ರಾಹುಲ್ ಒಬ್ಬರೇ ಹೊಣೆ ಅಲ್ಲ; ಇದು ಸಮಷ್ಟೀ ಹೊಣೆಗಾರಿಕೆಯ ವಿಷಯವಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಹೇಳಿದರು.
ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು; ಬದಲು ಪಕ್ಷವನ್ನು ಆಮೂಲಾಗ್ರವಾಗಿ, ಎಲ್ಲ ಮಟ್ಟಗಳಲ್ಲಿ, ಪುನಶ್ಚೇತನಗೊಳಿಸುವ ಮತ್ತು ಪುನಾರಚಿಸುವ ಹೊಣೆಗಾರಿಕೆಯನ್ನು
ನಿಭಾಯಿಸಬೇಕು ಎಂದು ಸಭೆಯು ಹೇಳಿತು.
ನಾಲ್ಕು ತಾಸುಗಳ ಕಾಲ ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಾ. ಮನಮೋಹನ್ ಸಿಂಗ್, ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂತಾಗಿ ಅನೇಕ ನಾಯಕರು ಹಾಗೂ ಕಾಂಗ್ರೆಸ್ ಆಡಳಿತೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ದೇಶದ ಯುವ ಜನತೆ, ರೈತರು, ಎಸ್‌ಸಿ ಎಸ್‌ಟಿ ಒಬಿಸಿ ಸಮುದಾಯದವರು, ಅಲ್ಪ ಸಂಖ್ಯಾಕರು, ಬಡವರು ಮತ್ತು ಅವಕಾಶ ವಂಚಿತರ ಅಭ್ಯದಯಕ್ಕಾಗಿ ಪಕ್ಷವು ಶ್ರಮಿಸಬೇಕಿದೆ ಮತ್ತು ಅದಕ್ಕಾಗಿ ಪಕ್ಷಕ್ಕೆ ರಾಹುಲ್ ಗಾಂಧಿ ಅವರ ನಾಯಕತ್ವದ ಅಗತ್ಯವಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.