ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ವಿರುದ್ಧದ ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ವಿಚಕ್ಷಣ ದಳ(ಸಿವಿಸಿ) ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ. ಸುಪ್ರೀಂ ಪೀಠ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.
ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ಕುಮಾರ್ ವರ್ಮಾ ಲಂಚ ಸ್ವೀಕರಿಸಿದ್ದಾರೆಂಬ ಆರೋಪದ ಬಗ್ಗೆ ಎರಡು ವಾರದ ಒಳಗೆ ತನಿಖೆ ನಡೆಸಿ ವರದಿ ನೀಡಬೇಕೆಂದು ಸುಪ್ರೀಂಕೋರ್ಟ್ ಅಕ್ಟೋಬರ್ 26ರಂದು ಸಿವಿಸಿಗೆ ಸೂಚಿಸಿತ್ತು.
ವರ್ಮಾ ವಿರುದ್ಧ ಸಿಸಿಸಿ ನಡೆಸುತ್ತಿರುವ ತನಿಖೆಯನ್ನು ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಎಕೆ ಪಾಟ್ನಾಯಕ್ ಅವರ ಉಸ್ತುವಾರಿಯಲ್ಲಿ ನಡೆಸುವಂತೆ ನೇಮಕ ಮಾಡಿತ್ತು. ಅಲ್ಲದೇ ತಮ್ಮನ್ನು ಬಲವಂತವಾಗಿ ರಜೆಯ ಮೇಲೆ ಕಳುಹಿಸಿರುವ ನಿರ್ಧಾರವನ್ನು ಪ್ರಶ್ನಿಸಿ ವರ್ಮಾ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.
ಆ ಹಿನ್ನೆಲೆಯಲ್ಲಿ ಸಿವಿಸಿ ಹಾಗೂ ಕೇಂದ್ರ ಸರ್ಕಾರಕ್ಕೂ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ಸಿಬಿಐನ ಪ್ರಭಾರ ನಿರ್ದೇಶಕ ಎಂ ನಾಗೇಶ್ವರ ರಾವ್ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಸುಪ್ರೀಂ ತಾಕೀತು ಮಾಡಿತ್ತು.
ಮಾಂಸ ರಫ್ತುದಾರ ಖುರೇಷಿಯಿಂದ ವರ್ಮಾ ಲಂಚ ಸ್ವೀಕರಿಸಿದ್ದಾರೆ ಎಂದು ಅಸ್ತಾನಾ ಆರೋಪಿಸಿದ್ದರು. ವರ್ಮಾ ಕೂಡಾ ಅಸ್ತಾನಾ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಹಾಗೂ ಅಲೋಕ್ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರು.