Advertisement

ಕಿಡಿಗೇಡಿಗಳ ಕೊಡಲಿ ಏಟಿಗೆ ನಾಶವಾದ ಸಾಧಕ ಬೆಳೆಸಿದ ಸಾಲು ಮರಗಳು

12:48 PM Mar 15, 2021 | Team Udayavani |

ಚಾಮರಾಜನಗರ: ನಗರದಲ್ಲಿ ಸಾಲು  ಮರದ ವೆಂಕಟೇಶ್‌ ಅವರು ತಮ್ಮ ಸ್ವಂತ ಹಣದಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದು, ಕೆಲ ಕಿಡಿಗೇಡಿಗಳ ಕೃತ್ಯದಿಂದ ಅಲ್ಲಲ್ಲಿಮರಗಳು ನಾಶವಾಗುತ್ತಿವೆ. ನ್ಯಾಯಾಲಯರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸುವ ಸಲುವಾಗಿ ಮರವನ್ನೇ ಕೆಡವಲಾಗಿದೆ.

Advertisement

ನ್ಯಾಯಾಲಯ ರಸ್ತೆಯಲ್ಲಿ ಕಾರಾಗೃಹದ ಮುಂಭಾಗ, ಸರ್ಕಾರಿ ನೌಕರರ ಸಂಘದಕಚೇರಿಯ ಮುಂದಿನ ರಸ್ತೆಯಲ್ಲೇ ಪ್ರತಿದಿನಲಾರಿಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಲಾರಿಗಳು ಸಾಲಾಗಿ ನಿಲ್ಲುತ್ತಿರುವುದರಿಂದರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೇ ವೆಂಕಟೇಶ್‌ ಬೆಳೆಸಿರುವಸಾಲು ಮರಗಳು ನಾಶವಾಗುತ್ತಿವೆ. ನಗರದ ರಸ್ತೆಗಳು ಅಭಿವೃದ್ಧಿಗೊಂಡನಂತರ ವೆಂಕಟೇಶ್‌ ಅವರು ಯಾವುದೇ ಪ್ರತಿ ಫ‌ಲಾ ಪೇಕ್ಷೆ ಇಲ್ಲದೇ ನಮ್ಮೂರು ಹಸಿ ರಾಗಿರಬೇಕೆಂಬ ನಿಸ್ವಾರ್ಥದಿಂದ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಅವರೇ ವಾರಕ್ಕೊಮ್ಮೆ ಟ್ಯಾಂಕರ್‌ನಲ್ಲಿ ನೀರು ಹಾಕಿ ಪೋಷಿಸುತ್ತಿದ್ಧಾರೆ. ಇದಕ್ಕಾಗಿ ಅವರು 15 ಲಕ್ಷಕ್ಕೂ ಹೆಚ್ಚು ರೂ. ಸ್ವಂತ ಹಣ ವ್ಯಯಿಸಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ.

ಕಿಡಿಗೇಡಿ ಕೃತ್ಯ: ಇಷ್ಟೆಲ್ಲ ಮಾಡಿದರೂ ಕೆಲವು ಸ್ವಾರ್ಥಿ ಗಳಿಂದಾಗಿ ಗಿಡಗಳು ನಾಶವಾಗುತ್ತಿವೆ. ನಂಜನಗೂಡು ರಸ್ತೆಯಲ್ಲಿ ಹಲವು ಗಿಡಗಳು ಹುಲುಸಾಗಿ ಬೆಳೆದಿದ್ದು, ಕೆಲವು ಗಿಡಗಳ ರೆಂಬೆ ಗಳನ್ನು ಕಡಿದಿರುವ ಕಿಡಿಗೇಡಿಗಳು ಸಾಯುವಂತೆ ಮಾಡಿದ್ದಾರೆ. ರಥದ ಬೀದಿಯಲ್ಲೂ ಹಸಿರಿನಿಂದ ಕೂಡಿದ ದೊಡ್ಡ ಗಿಡವೊಂದನ್ನು ಸಾಯುವಂತೆ ಮಾಡಿದ್ದಾರೆ. ಇನ್ನೂ ಕೆಲವೆಡೆ ಚಿಕ್ಕ ಚಿಕ್ಕ ಗಿಡಗಳನ್ನು ಕಿತ್ತು ಎಸೆದಿದ್ದಾರೆ. ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿನಿಲ್ದಾಣದ ಬಳಿ ನೆಡಲಾಗಿರುವ ಸಾಲುಗಿಡಗಳನ್ನು ಲಾರಿಗಳನ್ನು ನಿಲ್ಲಿಸುವುದಕ್ಕಾಗಿ ನಾಶ ಪಡಿಸಲಾಗಿದೆ. ಕೆಲವು ಅಂಗಡಿಗಳ ಮಾಲೀಕರು, ತಮ್ಮಅಂಗಡಿಗೆ ಗಿಡದ ರೆಂಬೆಗಳು ಅಡ್ಡವಾಗುತ್ತಿವೆಎಂದು ರೆಂಬೆಗಳನ್ನು ಬೇಕಾಬಿಟ್ಟಿಯಾಗಿಕತ್ತರಿಸಿ ಹಾಕುತ್ತಿದ್ದಾರೆ. ಇನ್ನೂ ಕೆಲವರು ಗಿಡಗಳು ಸಾಯುವಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ನ್ಯಾಯಾಲಯ ರಸ್ತೆಯಲ್ಲಿ ಕಾರಾಗೃಹದ ಮುಂದೆ ಲಾರಿಗಳ ಪಾರ್ಕಿಂಗ್‌ನಿಂದಾಗಿ ವೆಂಕಟೇಶ್‌ ಅವರು ಕಷ್ಟಪಟ್ಟು ಬೆಳೆಸಿರುವ ಸಾಲುಮರಗಳಿಗೂ ಧಕ್ಕೆಯಾಗುತ್ತಿದೆ. ಈ ಲಾರಿಗಳನ್ನು ನಿಲ್ಲಿಸಲು ಗಿಡಗಳನ್ನು ಕತ್ತರಿಸಲಾಗುತ್ತದೆ. ಹೀಗಾಗಿ ಆಳೆತ್ತರಕ್ಕೆ ಬೆಳೆದ ಪುಟ್ಟ ಮರ ಗಳ ಕೊಂಬೆಗಳು ಮುರಿಯುತ್ತಿವೆ. ಗಿಡಗಳು ಕ್ಷೀಣವಾಗುತ್ತಿವೆ. ಎರಡು ದಿನಗಳ ಹಿಂದೆ ಲಾರಿಯೊಂದು 20 ಅಡಿ ಎತ್ತರಕ್ಕೆ ಬೆಳೆದಿದ್ದ ಪುಟ್ಟ ಮರವೊಂದನ್ನು ಕೆಡವಿ ಹಾಕಿದೆ.

ಸಸಿಗಳಿಗೆ ಟ್ಯಾಂಕರ್‌ ನೀರು: ಲಾರಿಗಳನ್ನು ನಿಲ್ಲಿಸಲು ಅನುಕೂಲವಾಗಲೆಂದು ಗಿಡವನ್ನುಲಾರಿ ಗುದ್ದಿಸಿ ಕೆಡವಿ ಹಾಕಲಾಗಿದೆ. ಸಾಲುಮರದ ವೆಂಕಟೇಶ್‌ ಅವರು ತಮ್ಮ ಸಂಪಾದನೆಯ ಹಣದಿಂದ ಬೆಂಗಳೂರಿನಲ್ಲಿ ಗಿಡವೊಂ ದಕ್ಕೆ 700 ರಿಂದ 900 ರೂ. ಖರ್ಚು ಮಾಡಿ ತಂದು ಇಲ್ಲಿ ನೆಟ್ಟು, ವಾರಕ್ಕೊಮ್ಮೆ ಟ್ಯಾಂಕ ರ್‌ ನಲ್ಲಿ ನೀರು ಹಾಕಿ ಬೆಳೆಸುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಅವರು ನೆಟ್ಟಗಿಡಕ್ಕೆ ಆಸಿಡ್‌ ಹಾಕುವುದು, ಕೊಂಬೆ ಕತ್ತರಿಸುವ ಮೂಲಕ ಗಿಡ ನಾಶ ಮಾಡುತ್ತಿದ್ದಾರೆ. ಬಿ.ರಾಚಯ್ಯ ಜೋಡಿ ರಸ್ತೆ, ಸಂಪಿಗೆ ರಸ್ತೆ,ಡೀವಿಯೇಷನ್‌ ರಸ್ತೆ, ಅಂಗಡಿ ಬೀದಿ, ರಥದಬೀದಿ, ಜಿಲ್ಲಾ ಕ್ರೀಡಾಂಗಣ, ಕೇಂದ್ರೀಯವಿದ್ಯಾ ಲಯ, ರೈಲ್ವೆ ನಿಲ್ದಾಣದ ರಸ್ತೆ ಮುಂತಾದೆಡೆ ವೆಂಕಟೇಶ್‌ ಸುಮಾರು 3 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.

Advertisement

ಪರ್ಯಾಯ ಸಸಿ: ವೆಂಕಟೇಶ್‌ ಗಿಡ ನೆಟ್ಟರೆ ಅದನ್ನು ರಕ್ಷಿಸುವ ಕೆಲಸವನ್ನಾದರೂ ಅರಣ್ಯಇಲಾಖೆ ಮಾಡಬಹುದು. ಆದರೆ ಇಲಾಖೆ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಯಾರ ಮೇಲೆಯೂ ವೆಂಕಟೇಶ್‌ ದೂರಲು ಹೋಗುವುದಿಲ್ಲ. ಗಿಡ ನಾಶವಾದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಮತ್ತೆ ಆ ಜಾಗದಲ್ಲಿ ಇನ್ನೊಂದು ಗಿಡ ನೆಡುತ್ತಾರೆ. ಮರವನ್ನು ಉರುಳಿಸಿರುವ ಬಗ್ಗೆ ಅವರಿಗೆ ನೋವಿದೆ. ಮಗುವಿನಂತೆ ಸಲಹುತ್ತೇನೆ. ಈ ರೀತಿ ನಾಶ ಮಾಡಿದರೆ ನೋವಾಗುತ್ತದೆ ಎಂದು ಸಂಕಟ ವ್ಯಕ್ತಪಡಿಸುತ್ತಾರೆ.

ಮರ ರಕ್ಷಿಸಿ: ನಗರಸಭೆ, ಜಿಲ್ಲಾಡಳಿತ ಅರಣ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ವೆಂಕಟೇಶ್‌ ತಾವು ಮಾಡುತ್ತಿದ್ದಾರೆ. ಗಿಡ ನೆಡುವುದು ಅದಕ್ಕೆ ನೀರು ಹಾಕುವುದು, ನಿರ್ವಹಣೆ ಮಾಡುವ ಕೆಲಸವನ್ನು ಅವರು ಶ್ರಮವಹಿಸಿ ಮಾಡುತ್ತಿದ್ದಾರೆ. ಆದರೆ ಕಿಡಿಗೇಡಿಗಳಿಂದಅವುಗಳನ್ನು ರಕ್ಷಿಸುವ ಕೆಲಸ ಅವರಿಂದಾಗುವುದಿಲ್ಲ. ನಗರಸಭೆ, ಅರಣ್ಯ ಇಲಾಖೆ ಪೊಲೀಸ್‌ ಇಲಾಖೆಗಳು ಇದಕ್ಕೆ ನೆರವು ನೀಡಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ತೊಂದರೆಯಾದರೆ ನಮ್ಮ ಗಮನಕ್ಕೆ ತನ್ನಿ:

ಎರಡು ಮೂರು ವರ್ಷ ಕಳೆದಿರುವ ಗಿಡಗಳು ನೆರಳು ಕೊಡುವುದಕ್ಕೆ ಶುರು ಮಾಡಿವೆ.ಅಂತಹ ಗಿಡಗಳನ್ನು ಸಾಯಿಸಲಾಗುತ್ತಿದೆ.ಯಾರು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ.ನನಗೆ ಅನೇಕ ಕೆಲಸಗಳಿರುತ್ತವೆ. ಪೊಲೀಸರಿಗೆದೂರು ನೀಡಿ, ಅದರ ಬಗ್ಗೆ ಓಡಾಡಲುನಿಂತರೆ ನನ್ನ ಕೆಲಸಗಳಿಗೆ ಅಡಚಣೆಯಾಗುತ್ತದೆಎನ್ನುತ್ತಾರೆ ಸಾಲುಮರದ ಸಾಧಕ ವೆಂಕಟೇಶ್‌ಅವರು. ಗಿಡಮರಗಳನ್ನು ನಾಶಮಾಡುವವರಿಗೆ ಅವುಗಳ ಮಹತ್ವ ಗೊತ್ತಿಲ್ಲ. ಕೆಲವು ಅಂಗಡಿಯವರು ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಯಾರಾದರೂತಮ್ಮ ಅಂಗಡಿಗಳಿಗೆ ತೊಂದರೆಯಾಗುತ್ತಿದೆಎಂದು ಗಮನಕ್ಕೆ ತಂದರೆ, ಅವರಿಗೆ ಅನು ಕೂಲ ವಾಗುವ ಹಾಗೆ ನಾವೇ ರೆಂಬೆ ಕತ್ತರಿಸಿಕೊಡು ತ್ತೇವೆ. ಒಟ್ಟಾರೆಯಾಗಿ ಕತ್ತರಿಸಿದರೆ ಗಿಡ ಸಾಯುತ್ತದೆ ಎಂದು ವಿಷಾದಿಸಿದ್ದಾರೆ.

ನಗರವನ್ನು ಹಸಿರೀಕರಣ ಮಾಡಿರುವ ಗುರಿ ಹೊಂದಿದ್ದೇನೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದೇನೆ. ನನ್ನ ಗುರಿಯಿಂದ ಹಿಂದೆ ಸರಿಯುವುದಿಲ್ಲ. ಎಲ್ಲೆಲ್ಲಿ ಗಿಡಗಳು ಸತ್ತಿವೆಯೋ, ಅಲ್ಲಿ ಮತ್ತೆ ನೆಡುತ್ತೇನೆ.ಆದರೆ, ಒಂದು ಗಿಡ ಬೆಳೆಸಲು ಕಷ್ಟವಿದೆ. ಜನರು ಆ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. -ಸಾಲು ಮರದ ವೆಂಕಟೇಶ್‌, ಪರಿಸರ ಪ್ರೇಮಿ

ಮರ ಗಿಡಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಹಾಗಾಗಿ ಪಾರ್ಕಿಂಗ್‌ಗಾಗಿ ಗಿಡಗಳನ್ನು ನಾಶ ಮಾಡುತ್ತಿರುವುದರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನ್ಯಾಯಾಲಯ ರಸ್ತೆಯಲ್ಲಿ ಲಾರಿ ಪಾರ್ಕಿಂಗ್‌ ಮಾಡದಂತೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಗುವುದು. -ಪ್ರಿಯದರ್ಶಿನಿ ಸಾಣೆಕೊಪ್ಪ, ಡಿವೈಎಸ್‌ಪಿ

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next