Advertisement

ಪದವೀಧರ ಶಿಕ್ಷಕರ ನೇಮಕಾತಿಗೆ ಕಟ್‌ಆಫ್ ಅಂಕ ಕಗ್ಗಂಟು

06:15 AM Aug 09, 2018 | Team Udayavani |

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಪದವೀಧರ ಶಿಕ್ಷಕರ ನೇಮಕಕ್ಕೆ ಕಟ್‌ಆಫ್ ಅಂಕ ನಿಗದಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಗ್ಗಂಟಾಗುತ್ತಿದ್ದು, ಕಟ್‌ಆಫ್ ಅಂಕದ ಬಗ್ಗೆ ಸ್ಪಷ್ಟ ನಿರ್ಧಾರ ಇನ್ನೂ ತೆಗೆದುಕೊಳ್ಳದೇ ಇರುವುದರಿಂದ ನೇಮಕಾತಿ ಪ್ರಕ್ರಿಯೆಯೇ ವಿಳಂಬವಾಗುತ್ತಿದೆ.

Advertisement

ಆರರಿಂದ 8ನೇ ತರಗತಿಯಲ್ಲಿ ಖಾಲಿ ಇರುವ 10 ಸಾವಿರ ಪದವೀಧರ ಹುದ್ದೆಗೆ ಶಿಕ್ಷಕರ ನೇಮಕಾತಿಗೆ ಜಿಲ್ಲಾಮಟ್ಟದಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್‌-2ರಲ್ಲಿ ಶೇ.50 ಅಂಕ ಮತ್ತು ಬೋಧನಾ ಭಾಷಾ ಸಾಮರ್ಥ್ಯ ಪರೀಕ್ಷೆ(ಪೇಪರ್‌-3)ಯಲ್ಲಿ ಶೇ.60ರಷ್ಟ ಕಟ್‌ಆಫ್ ಅಂಕ ನಿಗದಿ ಮಾಡಿದ್ದರು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ಕೌನ್ಸೆಲಿಂಗ್‌ಗೆ 1:2 ಪಟ್ಟಿ ಬಿಡುಗಡೆ ಮಾಡಿತ್ತು. 10 ಸಾವಿರ ಹುದ್ದೆಗೆ ಕೇವಲ 2264 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು.

1:2 ಕೌನ್ಸೆಲ್ಸಿಂಗ್‌ ನಂತರವೂ ಹೆಚ್ಚು ಹುದ್ದೆ ಉಳಿಯಲಿದೆ ಎಂಬ ಕಾರಣಕ್ಕೆ ಜುಲೈ 17ರಂದು ಕಟ್‌ಆಫ್ ಅಂಕ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ನಾನ್‌ಸೆಮಿಸ್ಟರ್‌ ಪದ್ಧತಿಯಲ್ಲಿ ಪದವಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಸರ್ಕಾರ ಈ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಹತ್ತು ದಿನಗಳ ನಂತರ(ಜುಲೈ 27) ಸರ್ಕಾರ ಇನ್ನೊಂದು ಆದೇಶ ಹೊರಡಿಸಿ,  ಪೇಪರ್‌ 2 ಮತ್ತು 3ರಲ್ಲಿ ಶೇ.1ರಿಂದ 5ರಷ್ಟು ಕನಿಷ್ಠ ಅಂಕ ಕಡಿಮೆ ಮಾಡುವುದಾಗಿ ಹೇಳಿತ್ತು. ಇದಕ್ಕೂ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಕಟ್‌ಆಫ್ಅಂಕದಲ್ಲಿ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಒಂದು ವರ್ಗ, ಕಟ್‌ ಆಫ್ ಅಂಕ ರದ್ದು ಮಾಡಿದ್ದು ಸರಿ ಎಂದು ಇನ್ನೊಂದು ವರ್ಗ. ಒಟ್ಟಾರೆಯಾಗಿ ಸರ್ಕಾರ ಅಡ್ಡಕತ್ತರಿಯಲ್ಲಿ ಸಿಲುಕಿತ್ತು. ಅಂತಿಮವಾಗಿ ಇಲಾಖೆ ಆಯಕ್ತರ ಮೂಲಕ ಎನ್‌ಐಸಿ ತಂತ್ರಾಂಶ ಆಧರಿಸಿ ವರದಿ ಸಿದ್ಧಪಡಿಸುವಂತೆ ನಿರ್ದೇಶನ ನೀಡಿತ್ತು.

Advertisement

ಕಟ್‌ಆಫ್ ಕಗ್ಗಂಟು:
10 ಸಾವಿರ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಟ್‌ಆಫ್ ನಿಗದಿ ಮಾಡಬೇಕೇ ಅಥವಾ ರದ್ದು ಮಾಡಬೇಕೆ ಎಂಬ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ಎಲ್ಲ ಜಿಲ್ಲೆಗಳ ಅರ್ಹರ ಪಟ್ಟಿ ಎನ್‌ಐಸಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ಏಳು ವಿಧದ ಕಟ್‌ಆಫ್ ಅಂಕಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

ಪೇಪರ್‌ 2 ಮತ್ತು 3ರಲ್ಲಿ 50:50 ಕಟ್‌ಆಫ್ಅಂಕ ನಿಗದಿ ಮಾಡಿದರೆ ಎಷ್ಟು ಅಭ್ಯರ್ಥಿಗಳು ಅರ್ಹರಾಗುತ್ತಾರೆ ಎನ್ನುವ ಮಾದರಿ ಸಿದ್ಧಪಡಿಸಿಕೊಂಡಿದ್ದಾರೆ. ಪೇಪರ್‌ 2 ಮತ್ತು 3ರಲ್ಲಿ 49:59, 48:58, 47:57, 46:56, 45:55 ಕಟ್‌ ಆಫ್ ಅಂಕ ನಿಗದಿ ಮಾಡಿದರೆ ಎಷ್ಟು ಅಭ್ಯರ್ಥಿಗಳ ಅರ್ಹರಾಗಬಹುದು ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಇದರ ಜತೆಗೆ ನೋ ಕಟ್‌ಆಫ್ ಮಾರ್ಕ್ಸ್ ಕೂಡ ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆಯ ಮೂಲ ಖಚಿತಪಡಿಸಿದೆ.

ಪಟ್ಟಿ ಗೊಂದಲ :
ನೇಮಕಾತಿ ಕೌನ್ಸೆಲಿಂಗ್‌ಗೆ ಈಗಾಗಲೇ ಹೊರಡಿಸಿರುವ 1:2 ಪಟ್ಟಿ ಮೂಲ ಸ್ವರೂಪದಲ್ಲಿ ಉಳಿಸಿಕೊಂಡು, ಹೊಸ ಅಭ್ಯರ್ಥಿಗಳನ್ನು ಅದಕ್ಕೆ ಸೇರಿಸಬೇಕೇ ಅಥವಾ ಹೊಸದಾಗಿ ಪಟ್ಟಿ ಬಿಡುಗಡೆ ಮಾಡಬೇಕೆ ಎಂಬ ಗೊಂದಲದಲ್ಲಿ ಇಲಾಖೆಯ ಅಧಿಕಾರಿಗಳಿದ್ದಾರೆ. ಕಟ್‌ಆಫ್ ಅಂಕ ಎಷ್ಟು ನಿಗದಿ ಮಾಡುತ್ತಾರೆ ಎನ್ನುವುದರ ಮೇಲೆಯ ಪಟ್ಟಿಯ ಅಂತಿಮ ಸ್ಪರೂಪ ತಿಳಿದುಬರುತ್ತದೆ. ಒಂದೊಮ್ಮೆ ಕಟ್‌ಆಫ್ ರದ್ದಾದರೆ ಪಟ್ಟಿ ಸಂಪೂರ್ಣ ಬದಲಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಕೇಂದ್ರೀಕೃತ ದಾಖಲಾತಿ ಘಟಕದಿಂದಲೂ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅರ್ಹ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪದವೀಧರ ಶಿಕ್ಷಕರ ಕಟ್‌ಆಫ್ ಅಂಕ ನಿಗದಿಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಎನ್‌ಐಸಿಯಿಂದ ವಾರಾಂತ್ಯದೊಳಗೆ ವಿಶ್ಲೇಷಣಾ ವರದಿ ಬರಲಿದೆ. ವರದಿ ಇಲ್ಲದೇ ಯಾವ ನಿರ್ಧಾರ ತೆಗೆದಿಕೊಳ್ಳಲು ಸಾಧ್ಯವಿಲ್ಲ.
– ಡಾ.ಪಿ.ಸಿ.ಜಾಫ‌ರ್‌, ಆಯುಕ್ತ,ಸಾರ್ವಜನಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next