ಮಗನಿಗೆ ಬಿಸಿಬೇಳೆ ಬಾತ್ ಎಂದರೆ ಪ್ರಾಣ. ಮೊನ್ನೆ ಇದ್ದಕ್ಕಿದ್ದಂತೆ- “ನಾಳೆ ಬಿಸಿಬೇಳೆ ಬಾತ್ ಮಾಡೋದನ್ನ ಹೇಳಿಕೊಡು. ಅದರ ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆ. ಮುಂದೆ ಏನಾದರೂ, ದೂರದ ಊರಿನಲ್ಲಿ ರೂಂ ಮಾಡಿಕೊಂಡಿರುವ ಸಂದರ್ಭ ಬಂದರೆ ಸುಲಭ ಆಗತ್ತೆ. ಬಿಸಿಬೇಳೆ ಬಾತ್ ಮಾಡಲು ಬಂದರೆ, ವಾರಪೂರ್ತಿ ಅದನ್ನು ತಿಂದೇ ಕಳೆದೇನು’ ಎಂದ! ಸರಿ. ಅವನಾಗಿಯೇ ಕಲಿಯುತ್ತೇನೆಂದಾಗ, ಕಲಿಸುವುದಕ್ಕೆ ನನಗೇನು?
ಹಿಂದಿನ ದಿನದಿಂದಲೇ ಶುರುಮಾಡಿದೆ. “ಮೂರು ಮುಷ್ಟಿ ಬಟಾಣಿ ನೆನೆಸಿಡು’ ಎಂದೆ. ಅವನು ಮೂರು ಮುಷ್ಟಿ ಅಳೆದು, ಪಾತ್ರೆಗೆ ಹಾಕಿ, ತಂದು ತೋರಿಸಿದ. ಅದು ಸರಾಸರಿ ಅರ್ಧ ಕೆ.ಜಿ. ಇತ್ತು. “ಅಯ್ಯೋ ಅಷ್ಟೆಲ್ಲ ಬೇಡ. ಅದರ ಅರ್ಧದಷ್ಟು ಸಾಕು’ ಎಂದೆ. ಅರ್ಧದಷ್ಟು ಬಟಾಣಿ ಎತ್ತಿಟ್ಟು, ಉಳಿದದ್ದನ್ನು ನೆನಸಿಟ್ಟ. ಬೆಳಗ್ಗೆ ಎದ್ದು ನನ್ನಷ್ಟಕ್ಕೆ ನಾನು ನನ್ನ ಕೆಲಸ ಮಾಡುವಂತಿರಲಿಲ್ಲ. “ಏಳು ಮಗನೇ’ ಎಂದೆ. ಅವನು ನಿತ್ಯಕರ್ಮ ಮುಗಿಸಿ ಬರುವವರೆಗೆ, ಕಾದು ಕುಳಿತಿದ್ದೆ.
ಬಂದ ನಂತರ ಅವನ ಕೈಯಿಂದಲೇ ದಪ್ಪ ಅವಲಕ್ಕಿ, ಹುಣಸೆಹಣ್ಣು ನೆನೆಸಿಡಲು ಹೇಳಿದೆ. ತೊಗರಿ ಬೇಳೆ ಅಳೆದು ಆರಿಸಿ, ಕುಕ್ಕರ್‌ಗೆ ಹಾಕಿ, ತೊಳೆಯಲು ಹೇಳಿದೆ. ನೀರು ಹಾಕಿ, ಎಣ್ಣೆ- ಅರಿಶಿನ, ಶೇಂಗಾಬೀಜ, ನೆನೆಸಿಟ್ಟ ಬಟಾಣಿ ಹಾಕಿಸಿದೆ. ಗ್ಯಾಸ್ ಸ್ಟೌ ಉರಿಯಲಾರಂಭಿಸಿತು. ಇತ್ತ ಬೀನ್ಸ್- ಕ್ಯಾರೆಟ್ ತೊಳೆದು ಹೆಚ್ಚಿ ಕೊಳ್ಳಲು ಹೇಳಿದೆ. ಇತ್ತ ಕುಕ್ಕರ್ ಒಳಗಿದ್ದ ಬೇಳೆ ಕುದಿಯಲಾರಂ ಭಿಸಿತು. ತರಕಾರಿ ಹೆಚ್ಚಿ ಕುಕ್ಕರ್‌ಗೆ ಹಾಕಿ, ಮತ್ತೆ ಉರಿ ಹೆಚ್ಚಿಸಿ, ಕುಕ್ಕರ್ ಎರಡು ವಿಷಲ್ ಹೊಡೆಯುವ ಹೊತ್ತಿಗೆ, ನನ್ನ ತಾಳ್ಮೆಯೂ ಸ್ವಲ್ಪ ಕೆಟ್ಟಿತ್ತು.
ಹೇಳಿಕೊಡುವುದಕ್ಕಿಂತ ಮಾಡುವುದೇ ಸುಲಭ ಎನಿಸತೊಡಗಿತು. ಇತ್ತ ಇಂಗಿನ ಒಗ್ಗರಣೆ ಹಾಕಿಕೊಂಡು, ಕ್ಯಾಪ್ಸಿಕಂ ಹೆಚ್ಚಿ-ಹುರಿದು, ಅದನ್ನು ಬೆಂದ ತರಕಾರಿ- ಬೇಳೆ ಯೊಂದಿಗೆ ಸೇರಿಸಿ, ಉಪ್ಪು, ಬೆಲ್ಲ ಹಾಕಿಸಿ, ಹುಣಸೆಹಣ್ಣಿ ನ ರಸ ಹಿಂಡಿಕೊಂಡು, ಅದಕ್ಕೆ ಬಿಸಿಬೇಳೆ ಬಾತ್ ಪುಡಿ ಸೇರಿಸಿ, ಕಲಸಿ ಕುಕ್ಕರಿಗೆ ಹಾಕಿಸಿದೆ. ಬಿಸಿಬೇಳೆಬಾತಿನ ಸಾಂಬಾರು ಕುದಿಯಲಾರಂ ಭಿಸಿತು. ಅದಕ್ಕೆ ನೆನೆದಿದ್ದ ಅವಲಕ್ಕಿ ಹಾಕಿ ಕೈಯಾಡಿಸಿದ ಮಗ. ನಂತರ ಎರಡು ಚಮಚ ತುಪ್ಪ ಹಾಕಿದಲ್ಲಿಗೆ, ಬಿಸಿಬೇಳೆ ಭಾತ್ ಸಿದಟಛಿವಾಯ್ತು.
“ಅಮ್ಮಾ ಬಿಸಿಬೇಳೆ ಬಾತ್ ಮಾಡಲು ಇಷ್ಟೆಲ್ಲಾ ಕೆಲಸ ಇದೆಯಾ? ತಿನ್ನಲು ಎಷ್ಟು ಸುಲಭ!’ ಅಂದ. “ಇನ್ನೊಂದು ಸರ್ತಿ ಬಿಸಿಬೇಳೆ ಭಾತ್ ಮಾಡುವಷ್ಟು ತರಕಾರಿ ತಂದಾಗಿದೆ! ಎರಡು ದಿನ ಬಿಟ್ಟು ಒಮ್ಮೆ ನೀನೇ ಮಾಡಿಬಿಡು. ಅಭ್ಯಾಸ ಆದ ಹಾಗೆ ಆಗ್ತದೆ’ ಅಂದೆ. “ಬೇಕಿಲ್ಲಮ್ಮ. ಬರತ್ತೆ’ ಅಂತ ಮಗ ಓಡಿ ಹೋದ. ಕೆಲವು ದಿನಗಳ ನಂತರ, ಇಂದಿನ ಕಥೆಯೇ ಮರು ಕಳಿಸಲಿದೆ ಎಂಬ ಸೂಚನೆ ನನಗೆ ಸಿಕ್ಕಿ ಹೋಯಿತು. ಮತ್ತೆ ಹೇಳಿ ಕೊಡಲು ನಾನು ಸಿದ್ಧಳಾಗಬೇಕು…
* ಸುರೇಖಾ ಭೀಮಗುಳಿ