Advertisement

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ

05:23 PM Apr 30, 2019 | pallavi |

ಹೊಸನಗರ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ದಂಧೆ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಸೂಚಿಸಿದರು.

Advertisement

ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಅಕ್ರಮ ದಂಧೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಇಲ್ಲಿನ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಎತ್ತುವಳಿ ಮತ್ತು ಸಾಗಾಟಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನ ಹರಿಯುವ ಶರಾವತಿ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಅಕ್ರಮವಾಗಿ ಮರಳುದಂಧೆ ನಡೆಯುತ್ತಿದೆ. ಯಾವುದೇ ಪರವಾನಗಿ ಇಲ್ಲಿದೆ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಮರಳು ದಂಧೆಕೋರರು ಕಳ್ಳದಾರಿ ಸೇರಿದಂತೆ ರಾಜಮಾರ್ಗದಲ್ಲಿಯೇ ಸಾಗಾಟ ನಡೆಸುತ್ತಿದ್ದಾರೆ. ಇಲ್ಲಿ ಅಧಿಕಾರಿಗಳ ಭಯವಿಲ್ಲವಾಗಿದೆ. ಆದ್ದರಿಂದ ಬಡವರು ರೈತರು ಗೃಹೋಪಯೋಗಿ ಕೆಲಸಕ್ಕೆ ಮರಳು ಲಭ್ಯವಾಗುತ್ತಿಲ್ಲ. ತಾಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲೇಬೇಕು ಎಂದರು.

ಅವೈಜ್ಞಾನಿಕ ಕ್ರಮ: ತಾಲೂಕಿನ ಮರಳುಗಾರಿಕೆ ಯಾರ್ಡ್‌ಗಳಲ್ಲಿ ಅವೈಜ್ಞಾನಿಕ ಕ್ರಮ ಜಾರಿಯಲ್ಲಿದೆ. ಭಾರೀ ಗಾತ್ರದ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ನದಿ ಪಾತ್ರಕ್ಕೆ ಧಕ್ಕೆಯಾಗಲಿದೆ. ಅಲ್ಲದೆ ನದಿ ಸುತ್ತ ಮುತ್ತಲ ಪ್ರದೇಶದ ಅಂತರ್ಜಲ ಬತ್ತುವ ಭೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಮೂರು ಮರಳು ಗಣಿಗಾರಿಕೆ ಕ್ವಾರಿಗಳಿವೆ. ಇಲ್ಲಿ ಯಾವೊಂದು ಕ್ವಾರಿಯೂ ನಿಯಮ ಪಾಲಿಸುತ್ತಿಲ್ಲ. ಇತ್ತ ಅಧಿಕಾರಿಗಳು ತಿರುಗಿ ನೋಡುತ್ತಿಲ್ಲ ಎಂದರೆ ಏನು ಅರ್ಥ. ಇಲಾಖೆ ಇತ್ತ ಗಮನ ನೀಡಿ ತಪ್ಪಿತಸ್ಥ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

Advertisement

ಸರಕಾರಿ ಯಾರ್ಡ್‌ ರಚಿಸಿ: ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗಳ ಮರಳು ಗಣಿಗಾರಿಕೆ ಕ್ವಾರಿಗಳಿಗೆ ಎಲ್ಲಾ ತೆರನಾದ ಸೌಲಭ್ಯ ದೊರಕುತ್ತಿದೆ. ಯಾರ್ಡ್‌ ನಿರ್ಮಾಣಕ್ಕೆ ಸ್ಥಳಾವಕಾಶ, ಪರವಾನಗಿ ಅಡೆತಡೆಗಳು ನಿವಾರಣೆ ಆಗುತ್ತಿವೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾರೆ ಎಂದರು.

ಸರಕಾರಿ ಮರಳು ಯಾರ್ಡ್‌ ನಿರ್ಮಾಣ ಇನ್ನೂ ನನೆಗುದಿಯಲ್ಲಿಯೇ ಇದೆ. ಇದಕ್ಕೆ ಇನ್ನೂ ಸ್ಥಳಾವಕಾಶ ಸಾಧ್ಯವಾಗಿಲ್ಲ. ತಾಲ್ಲೂಕಿನಲ್ಲಿ ಬಹುಬೇಗ ಸರಕಾರಿ ಮರಳು ಯಾರ್ಡ್‌ ನಿರ್ಮಾಣ ಆಗಬೇಕು ಎಂದು ತಿಳಿಸಿದರು.

ಸರಕಾರಿ ಮರಳು ಯಾರ್ಡ್‌ ನಿರ್ಮಾಣವಾದಲ್ಲಿ ಅಕ್ರಮ ಮರಳು ವಹಿವಾಟು ದಂಧೆಗೆ ಕಡಿವಾಣ ಹಾಕಬಹುದಾಗಿದೆ. ಇತ್ತ ಅಧಿಕಾರಿಗಳು ಗಮನ ಹರಿಸಿ ವಾರದೊಳಗೆ ವರದಿ ಕೊಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಎಂ. ಸಿದ್ದೇಶ್‌, ಗಣಿ ಮತ್ತು ಭೂ ವಿಜ್ಞನ ಇಲಾಖೆಯ ಅಧಿಕಾರಿ ರಶ್ಮಿ, ಲೋಕೋಪಯೋಗಿ ಇಲಾಖೆ ಎಇಇ ಶೇಷಪ್ಪ, ತಾಪಂ ಇಒ ಡಾ| ರಾಮಚಂದ್ರ ಭಟ್, ಜಿಪಂ ಎಇಇ ಹಾಲೇಶಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next