Advertisement
ಮಾನ್ಯಾ ದಾಮೇರ್ಲ (10)ಮೃತ ಬಾಲಕಿ. ಭದ್ರತಾ ಸಿಬ್ಬಂದಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ. ಗುರುವಾರ ಸಂಜೆ 8.30ಕ್ಕೆ ಘಟನೆ ನಡೆದಿದೆ. ಈಜುಕೊಳದ ಬಳಿ ವಿದ್ಯುತ್ ತಂತಿಯಿದ್ದು, ಆ ತಂತಿ ಸ್ಪರ್ಶಿಸಿ ಬಾಲಕಿ ನೀರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಶಂಕಿಸಿದ್ದು, ಈ ಬಗ್ಗೆ ವರ್ತೂರು ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಮೇಲಕ್ಕೆ ಎತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾನ್ಯಾಳನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
Related Articles
Advertisement
ಅಪಾರ್ಟ್‌ಮೆಂಟ್ ನಿರ್ವಹಣಾ ತಂಡದ ಎಡವಟ್ಟಿಗೆ ಅಮಾಯಕ ಜೀವ ಬಲಿಯಾಗಿದೆ. ಹಲವು ಬಾರಿ ಘಟನೆ ನಡೆದರೂ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎಂದು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ವರ್ತೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾವಿಗೆ ಇಂಧನ ಸಚಿವರೇ ಹೊಣೆ: ಸುನೀಲ್ ಆರೋಪ:
ಬೆಂಗಳೂರಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ವಿದ್ಯುತ್ ಅವಘಡಗಳಿಂದ ಜನರು ಸಾವನ್ನಪ್ಪುತ್ತಿರುವುದಕ್ಕೆ ಇಂಧನ ಇಲಾಖೆ ಸಚಿವರೇ ಹೊಣೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ. ವರ್ತೂರಿನಲ್ಲಿ ಬಾಲಕಿಯೊಬ್ಬಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾಳೆ. ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆಯ ವಿಚಾರದಲ್ಲಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಆಕೆ ಮೃತ ಪಟ್ಟಿದ್ದಾಳೆ. ಇದೇ ಅಪಾರ್ಟ್‌ಮೆಂಟಿನಲ್ಲಿ ಮೂರು ತಿಂಗಳ ಹಿಂದೆ ಬಾಲಕಿಗೆ ಕರೆಂಟ್ ಶಾಕ್ ಹೊಡೆದಿತ್ತು. ಆದರೆ, ಆಕೆ ಅದೃಷ್ಟವಶಾತ್ ಬಚಾವಾಗಿದ್ದಳು. ಘಟನಾ ಸ್ಥಳದಲ್ಲಿ ನಿನ್ನೆಯವರೆಗೂ ಇದ್ದ ಸಿಸಿ ಟಿವಿ ವ್ಯವಸ್ಥೆಯನ್ನು ಈಗ ತೆಗೆದಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ ಎಂದು ಆರೋಪಿಸಿದರು. ಕಾಡುಗೋಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಜ್ಞರು ನೀಡಿರುವ ವರದಿಯನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪಾಲಕರ ದೂರಿನ ಮೇಲೆ ಪೊಲೀಸರಿಂದ ತನಿಖೆ :
ಡಿ.28ರಂದು ರಾತ್ರಿ 8 ಗಂಟೆಗೆ ಅಪಾರ್ಟ್‌ಮೆಂಟ್‌ನ ಬಳಿ ಇರುವ ಈಜುಕೊಳದ ನೀರಿನಲ್ಲಿ ಮಾನ್ಯಾ ಮುಳುಗಿದ್ದಳು. ಸಾರ್ವಜನಿಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ತಮ್ಮ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿಯ ತಂದೆ ರಾಜೇಶ್ ಕುಮಾರ್ ಉಲ್ಲೇಖೀಸಿದ್ದಾರೆ. ಇದೀಗ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.