Advertisement

“ಪ್ರಸ್ತುತ ಹಿರಿಯ ನಾಗರಿಕರ ಅನುಭವ ಅಗತ್ಯ’

01:21 PM Oct 05, 2017 | |

ಚಾಮರಾಜನಗರ: ಹಿರಿಯ ನಾಗರಿಕರ ಅಮೂಲ್ಯ ಸೇವೆ, ಕೊಡುಗೆ ಸೇರಿದಂತೆ ಹೊಂದಿರುವ ಅಪಾರವಾದ ಅನುಭವದ ಪ್ರಯೋಜನ ಪ್ರಸ್ತುತ ಸಂದರ್ಭಗಳಿಗೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ರಾಮಚಂದ್ರ ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರನ್ನು ಈ ಹಿಂದೆ ಪೂಜ್ಯ ಸ್ಥಾನದಲ್ಲಿ ಇಟ್ಟು ಗೌರವಿಸಲಾಗುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಸಲಹೆಗಳಿಗೆ ಹೆಚ್ಚು ಕಿವಿಗೊಡುತ್ತಿಲ್ಲ. ಹಿರಿಯ ನಾಗರಿಕರ ಸೇವೆ, ಅನುಭವ ಇಂದಿನ ಸಂದರ್ಭಕ್ಕೆ ಮಾರ್ಗದರ್ಶಕವಾಗಿದೆ. ಹೀಗಾಗಿ ಹಿರಿಯ ನಾಗರಿಕರನ್ನು ಕಡೆಗಣಿಸದೆ ಅವರ ಅಭಿಪ್ರಾಯ ಸಲಹೆಗಳನ್ನು ಪಡೆಯಬೇಕಿದೆ ಎಂದು ತಿಳಿಸಿದರು.

ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಹೆಚ್ಚಿದೆ: ಶ್ರೀಮಂತ ಸಂಸ್ಕೃತಿ ಪರಂಪರೆ ಆಚರಣೆಗೆ ಹೆಸರಾದ ಭಾರತ ದೇಶದಲ್ಲಿ ಇತ್ತೀಚೆಗೆ ಪಾಶ್ಚಿಮಾತ್ಯ ಅನುಕರಣೆ ಹೆಚ್ಚಾಗಿವೆ. ವಿದ್ಯಾವಂತರಾದಂತೆಲ್ಲಾ ಕುಟುಂಬದ ಹಿರಿಯರಿಗೂ ಆಶ್ರಯ ನೀಡಿ ಪ್ರೀತಿಯಿಂದ ನೋಡಿಕೊಳ್ಳದಿರುವ ವಾತಾವರಣ
ಕೆಲವೆಡೆ ಕಂಡುಬರುತ್ತಿದೆ. ಒತ್ತಡದ ಕಾರಣದಿಂದ ವೃದ್ಧಾಶ್ರಮಕ್ಕೆ ಹಿರಿಯರನ್ನು ಕಳುಹಿಸುವ ಪ್ರವೃತ್ತಿ ನಿಲ್ಲಬೇಕಿದೆ. ಪ್ರೀತಿ ವಾತ್ಸಲ್ಯದಿಂದ ಮುಪ್ಪಿನ ಕಾಲದಲ್ಲಿ ಹಿರಿಯರಿಗೆ ಆಸರೆಯಾಗಿ ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಶೋಭಾ, ಹಿರಿಯರನ್ನು ಪ್ರೀತಿ ಆದರದಿಂದ ಪೋಷಣೆ ಮಾಡಬೇಕು. ಕಷ್ಟಪಟ್ಟು ಮಕ್ಕಳ ಬೆಳವಣಿಗೆಗೆ ಕಾರಣರಾದ ಹಿರಿಯ ಪೋಷಕರಿಗೆ ಗೌರವ ನೀಡಬೇಕು. ಒಂಟಿತನ ಕಾಡದಂತೆ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಹೇಳಿದರು.

Advertisement

ಚೆನ್ನಾಗಿ ನೋಡಿಕೊಳ್ಳಿ: ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿಸದಾಶಿವಮೂರ್ತಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಲವೆಡೆ ಹೃದಯ ವೈಶಾಲ್ಯತೆ ಕಳೆದುಕೊಂಡ ನಿದರ್ಶನಗಳು ನೋಡುತ್ತಿದ್ದೇವೆ. ಮಕ್ಕಳು ಹಿರಿಯರನ್ನು ನಿರ್ಲಕ್ಷ್ಯ ಮಾಡುವ ಪ್ರಕರಣಗಳು ಕಂಡುಬರುತ್ತಿವೆ. ಇಡೀ ಜೀವನವನ್ನೇ ಮಕ್ಕಳ ಏಳಿಗೆಗೆ ಮುಡುಪಾಗಿಟ್ಟ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಸಂಸ್ಕೃತಿ ಮುಂದುವರಿ ಯಬೇಕಾಗಿದೆ ಎಂದು ಹೇಳಿದರು.

ಹಿರಿಯರ ಅನುಭವ ಕೇಳಿ ಪಡೆಯಿರಿ: ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ್‌ (ಕಮಲ್‌) ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಜ್ಞಾನ ಹೊಂದಿರುವ ಹಿರಿಯ ನಾಗರಿಕರು ಇದ್ದಾರೆ. ಸಮಾಜದ ಒಳಿತಿಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಅನುಭವದ ಜಾnನ ಎಲ್ಲರಿಗೂ ಅಗತ್ಯವಾಗಿ ಬೇಕು. ಹೀಗಾಗಿ ಯಾರನ್ನೂ ನಿರ್ಲಕ್ಷ್ಯ ಮಾಡದೆ ಹಿರಿಯರ ಅನುಭವ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ವಯಸ್ಸು ದೇಹಕ್ಕೆ ಮನಸ್ಸಿಗಲ್ಲ: ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್‌ ಮಾತನಾಡಿ ಹಿರಿಯ ನಾಗರಿಕರು ಸದಾ ಉತ್ಸಾಹಿಗಳಾಗಿರಬೇಕು. ವಯಸ್ಸಾಗುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬ ಸಕಾರಾತ್ಮಕ ಮನೋಭಾವನೆ ಹೊಂದಬೇಕು. ಸ್ವಾವಲಂಬಿಗಳಾಗಿ ಬದುಕಲು ಸರ್ಕಾರ ಸಾಕಷ್ಟು ಯೋಜನೆ ಹಾಗೂ ನೆರವು ಕಾರ್ಯಕ್ರಮ ರೂಪಿಸಿದೆ. ಇವುಗಳ ಬಳಕೆ ಮಾಡಿಕೊಂಡು ಸುಖೀ ಜೀವನ ನಡೆಸಬೇಕೆಂದು ಸಲಹೆ ಮಾಡಿದರು. 

ಇದೇ ವೇಳೆ ಸಾಹಿತ್ಯ ಕ್ಷೇತ್ರದಲ್ಲಿ ಜಗದೀಶ್‌, ಕ್ರೀಡಾ ಕ್ಷೇತ್ರದಲ್ಲಿ ನಾರಾಯಣ ಜಟ್ಟಪ್ಪ ಉರುಫ್ಪುಟ್ಟಣ್ಣ ಹಾಗೂ ಕಲಾ ಕ್ಷೇತ್ರದಲ್ಲಿನ ಸಾಧನೆಗೆ ಪುಟ್ಟಬಸವನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಮ್ಮ, ಯೋಗೇಶ್‌, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು, ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮೂಲಿಮನಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಪೃಥ್ವಿದಾಸ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next